ರಾಜ್ಯ

ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಕ್ಕಾಗಿ ಬಿಎಂಟಿಸಿ ಬಸ್ ಮಾರ್ಗ ಪುನಾರಚನೆ

Srinivas Rao BV

ಬೆಂಗಳೂರು: ನಮ್ಮ ಮೆಟ್ರೋದ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದು, ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬಿಎಂಟಿಸಿ ತನ್ನ ಬಸ್ ಗಳ ಮಾರ್ಗಗಳನ್ನು ಪುನಾರಚನೆ ಮಾಡುವ ಪ್ರಸ್ತಾವನೆಯನ್ನು ಪರಿಗಣಿಸಿದೆ.
ನಾಯಂಡಹಳ್ಳಿ- ಬೈಯ್ಯಪ್ಪನ ಹಳ್ಳಿ ವರೆಗಿನ ಮೆಟ್ರೋ ಮಾರ್ಗದಲ್ಲಿ ರೈಲುಗಳ ಸಂಚಾರ ಪ್ರಾರಂಭವಾದ ಬೆನ್ನಲ್ಲೇ ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕಾಗಿ ಸಾರ್ವಜನಿಕರ ಬೇಡಿಕೆ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದ್ದು, ಬೇಡಿಕೆಗೆ ಅನುಗುಣವಾಗಿ ಬಸ್ ಮಾರ್ಗಗಳನ್ನು ಬದಲಾವಣೆ ಮಾಡಲು ಬಿಎಂಟಿಸಿ ಉತ್ಸುಕವಾಗಿದೆ ಎಂದು ಸಂಸ್ಥೆಯ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ ರೇಣುಕೇಶ್ವರ್ ಬಿಸಿ ಹೇಳಿದ್ದಾರೆ.
ಮೆಟ್ರೋ ರೈಲುಗಳಿಗೆ ಸಂಪರ್ಕ ಕಲ್ಪಿಸುವ ಯಾವ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸಲು ಮುಂದಾಗಿರುವ ಬಿಎಂಟಿಸಿ ಇದಕ್ಕಾಗಿ ಬಿಎಂಟಿಸಿ ಅಧಿಕಾರಿಗಳ ತಂಡವನ್ನು ರಚಿಸಿದೆ. ಈ ತಂಡ ಸಾರ್ವಜನಿಕರೊಂದಿಗೆ ಮಾತನಾಡಿ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಬಿಎಂಟಿಸಿ ಬಸ್ ಮಾರ್ಗಗಳ ಬಗ್ಗೆ ಮಾಹಿತಿ ಪಡೆಯಲಿದೆ. ಸಾರ್ವಜನಿಕರಿಂದ ಪಡೆದ ಮಾಹಿತಿಯನ್ನು ಆಧರಿಸಿ ಮೆಟ್ರೋ ನಿಲ್ದಾಣಗಳಿರುವ ಪ್ರದೇಶದಲ್ಲಿ ಬಿಎಂಟಿಸಿ ಬಸ್ ಮಾರ್ಗಗಳನ್ನು ಪುನಾರಚನೆ ಮಾಡಲಾಗುತ್ತದೆ. 
ಮುಂದಿನ 15 ದಿನಗಳಲ್ಲಿ ತಾತ್ಕಾಲಿಕ ಯೋಜನೆಯೊಂದನ್ನು ಸಿದ್ಧಪಡಿಸಿ, ನಾಗರಬಾವಿಯಿಂದ ನಾಯಂಡಹಳ್ಳಿ ವರೆಗೆ ಮೆಟ್ರೋ ಸಂಪರ್ಕಕ್ಕೆ ಅನುಕೂಲವಾಗುವಂತೆ ಬಿಎಂಟಿಸಿ ಸೇವೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ರೇಣುಕೇಶ್ವರ್ ತಿಳಿಸಿದ್ದಾರೆ.

SCROLL FOR NEXT