ಬೆಂಗಳೂರು: ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಐಡಿ ಆಧಿಕಾರಿಗಳು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ಪ್ಯಾಲೇಸ್ ಗುಟ್ಟಹಳ್ಳಿಯ ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಸತೀಶ್ ಹಾಗೂ ಸದಾಶಿವನವಗರದಲ್ಲಿರುವ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್ ಕುಮಾರ್ ಬಂಧಿತರು. ಇದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೇರಿದ್ದು, ತಲೆ ಮರೆಸಿಕೊಂಡಿರುವ ಕಿರಣ್, ಶಿವಕುಮಾರ್, ದಿನೇಶ್ ಅವರಿಗಾಗಿ ಸಿಐಡಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಬೆಸ್ಟ್ ಶಿಕ್ಷಕ ಈಗ ವಿದ್ಯಾರ್ಥಿ ವಂಚಕ!
ಸದಾಶಿವನಗರದಲ್ಲಿರುವ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್ ಕುಮಾರ್‌ಗೆ ಮತ್ತು ಮತ್ತಿಕೆರೆ ಸರ್ಕಾರಿ ಶಾಲೆ ಶಿಕ್ಷಕ ಸತೀಶ್‌ಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ 2015-16ನೇ ಸಾಲಿನಲ್ಲಿ ಗೌರವಿಸಲಾಗಿತ್ತು. ಇದನ್ನು ಪೂರ್ಣ ಪ್ರಜ್ಞಾ ಕಾಲೇಜಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ಪ್ರಕಟಿಸಲಾಗಿದೆ. ಇನ್ನು ರಾಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಅನಿಲ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಎಂಬ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದೆ.
ಶಿಕ್ಷಕರ ವರ್ಗಾವಣೆ ಮಾತ್ರವಲ್ಲದೆ, ಪರೀಕ್ಷೆ ಸೇರಿ ಇಲಾಖೆಯ ಉನ್ನತ ಮಟ್ಟದ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಅನಿಲ್ ಕುಮಾರ್ ಹಿರಿಯ ಅಧಿಕಾರಿ ಜತೆಯೇ ಇರುತ್ತಿದ್ದ. ಈತನ ಉನ್ನತಮಟ್ಟದ ಲಿಂಕ್‌ನೋಡಿ ಇತರೆ ಶಿಕ್ಷಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಈತನನ್ನೇ ಹಿಡಿಯುತ್ತಿದ್ದರು. ಕೆಮಿಸ್ಟ್ರಿ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಇನ್ನು ಮಂಗಳವಾರ ಬಂಧನಕ್ಕೊಳಗಾಗಿರುವ ಅನಿಲ್, ಸತೀಶ್ ಸೇರಿದಂತೆ ಇದುವರೆಗೆ ಬಂಧಿತರಾಗಿರುವ ಓಬಳರಾಜು, ಮಂಜುನಾಥ್ ಹಾಗೂ ರುದ್ರಪ್ಪ ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತೊಡಗಿಕೊಂಡಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಎರಡನೇ ಬಾರಿಯ ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯದಲ್ಲೂ ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಜುನಾಥ್, ಅನಿಲ್ ಮತ್ತು ಸತೀಶ್ ದೈಹಿಕ ಶಿಕ್ಷಕರಾಗಿರುವುದರಿಂದ ಕ್ರೀಡಾಕೂಟ ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಸಂದರ್ಭದಲ್ಲಿ ಪರಸ್ಪರ ಪರಿಚಿತರಾಗಿದ್ದು, ಬಳಿಕ ಗೆಳೆಯರಾದರು. ಇದರಿಂದ ಅವರ ಮಧ್ಯೆ ಹಣಕಾಸು ವ್ಯವಹಾರವೂ ಆರಂಭವಾಗಿತ್ತು. ಕಳೆದ ಒಂದು ವರ್ಷದಿಂದ ಅವರಲ್ಲಿ ಆತ್ಮೀಯತೆ ಬೆಳೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಶ್ನೆ ಪತ್ರಿಕೆ ಮಾರಾಟ ದಂಧೆ ಗುಂಪಿನ ಪ್ರಮುಖನಾಗಿದ್ದ ಮಂಜುನಾಥ್, ಹಣದಾಸೆ ತೋರಿಸಿ ಅನಿಲ್ ಮತ್ತು ಸತೀಶ್‌ನನ್ನು ತನ್ನ ಜಾಲಕ್ಕೆ ಸೇರಿಸಿಕೊಂಡಿದ್ದ. ಪ್ರಶ್ನೆ ಪತ್ರಿಕೆ ಮಾರಾಟದಿಂದ ಬರುವ "ಆರ್ಥಿಕ ಲಾಭ' ಬಗ್ಗೆ ಸ್ನೇಹಿತರಿಗೆ ವಿವರಿಸಿದ್ದ ಮಂಜುನಾಥ್, ತನ್ನೊಂದಿಗೆ ಸಹಕರಿಸಿದರೆ ಇಂತಿಷ್ಟು ಕಮಿಷನ್ ನೀಡುವುದಾಗಿ ಹೇಳಿದ್ದ. ಅದಕ್ಕೊಪ್ಪಿದ ಸತೀಶ್ ಹಾಗೂ ಅನಿಲ್ ಪ್ರಶ್ನೆಪತ್ರಿಕೆಗಳನ್ನು ಮಂಜುನಾಥ್‌ನಿಂದ ಪಡೆದು ತಮಗೆ ಪರಿಚಿತರು ಸೇರಿದಂತೆ ಇನ್ನಿತರರಿಗೆ ಮಾರಿ ಹಣ ಸಂಗ್ರಹಿಸಿದ್ದಾರೆ. ಈ ದಂಧೆಯಲ್ಲಿ ಈವರೆಗಿನ ಮಾಹಿತಿ ಪ್ರಕಾರ ಈ ಇಬ್ಬರು 4ರಿಂದ 5 ಲಕ್ಷ ರೂ.ನಷ್ಟು ವಸೂಲಿ ಮಾಡಿದ್ದು, ಮಂಜುನಾಥ್‌ನಿಂದ ಒಳ್ಳೆಯ ಕಮಿಷನ್ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.