ಬೆಳಗಾವಿ: ಬೆಳಗಾವಿ, ಮಹಾರಾಷ್ಟ್ರ ಪ್ರದೇಶದಲ್ಲಿ ಮರಾಠ ಸಾಮ್ರಾಟ್ ಛತ್ರಪತಿ ಶಿವಾಜಿ ಅನೇಕರಿಗೆ ಅನುಕರಣೀಯ ವ್ಯಕ್ತಿ. ಈಗಂತೂ ಶಿವಾಜಿಯಂತೆ ಗಡ್ಡ, ಮೀಸೆ ಬಿಡುವುದು ಹೊಸ ಟ್ರೆಂಡ್ ಆಗಿದೆ.
ಯುವಕರು ಗಡ್ಡ ಬಿಡುವುದು ಇತ್ತೀಚಿನ ದಿನಗಳಲ್ಲಿ ಗ್ಲೋಬಲ್ ಟ್ರೆಂಡ್ ಆಗಿದ್ದರೆ, ಶಿವಾಜಿ ಶೈಲಿಯಲ್ಲಿ ಗಡ್ಡ, ಮೀಸೆ ಬೆಳೆಸುವುದು ಬೆಳಗಾವಿಯ ಲೋಕಲ್ ಸ್ಟೈಲ್ ಆಗಿದೆ. ಶಿವಾಜಿ ಜಯಂತಿ ಆಚರಣೆಗೆ ತಯಾರಿ ನಡೆಸುತ್ತಿರುವ ಕೆಲವು ಯುವಕರು ಶಿವಾಜಿ ಶೈಲಿ ಗಡ್ಡದ ಟ್ರೆಂಡ್ ಸೆಟ್ಟರ್ ಗಳಾಗಿದ್ದಾರೆ. ಶಿವಾಜಿ ಜಯಂತಿ ಆಚರಣೆ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ವೇಳೆ ನಡೆಯುವ ಉತ್ಸವದಲ್ಲಿ ಅನೇಕ ಯುವಕರು ಶಿವಾಜಿ ವೇಶಧಾರಿಗಳಾಗುತ್ತಾರೆ. ಉತ್ಸವದಲ್ಲಿ ಶಿವಾಜಿ ವೇಶಧಾರಿಗಳಾಗುವ ಯುವಕರು ಕೃತಕ ಗಡ್ಡಕ್ಕಿಂತ, ಸಹಜವಾಗಿಯೇ ಶಿವಾಜಿ ಮಾದರಿಯಲ್ಲಿ ಗಡ್ಡ ಬೆಳೆಸುವುದು ಉತ್ತಮ ಎಂಬ ನಿರ್ಧಾರ ಕೈಗೊಂಡಿರುವುದರಿಂದ ಬೆಳಗಾವಿ ಪ್ರದೇಶದಲ್ಲಿ ಶಿವಾಜಿ ಶೈಲಿಯಲ್ಲಿ ಗಡ್ಡ ಬೆಳೆಸುವ ಟ್ರೆಂಡ್ ಪ್ರಾರಂಭವಾಗಿದೆ.
ಕೆಲವು ಯುವಕರು ಶಿವಾಜಿ ಶೈಲಿಯ ಗಡ್ಡವನ್ನು ಶಿವಾಜಿ ಜಯಂತಿ ಆಚರಣೆ ವರೆಗೂ ಮಾತ್ರ ಸೀಮಿತಗೊಳಿಸುವುದಾಗಿ ತಿಳಿಸಿದ್ದರೆ, ಮತ್ತೆ ಕೆಲವರು ಜಯಂತಿ ಉತ್ಸವ ನಡೆದ ಬಳಿಕವೂ ಅದೇ ಶೈಲಿಯನ್ನು ಮುಂದುವರೆಸಲು ಬಯಸುತ್ತಿದ್ದಾರೆ. ಇನ್ನು ಕೇಶ ವಿನ್ಯಾಸಕರ( ಕ್ಷೌರಿಕರ) ಬಳಿ ಬರುವ ಯುವಕರು ಶಿವಾಜಿ ಶೈಲಿಗಾಗಿ ಕೇಳುತ್ತಿದ್ದಾರೆ. ಶಿವಾಜಿ ಶೈಲಿಯಲ್ಲಿ ಗಡ್ಡ ಬಿಡಬೇಕಾದರೆ 45 ದಿನಗಳು ಬೇಕಾಗುತ್ತದೆ ಎಂದು ಕೇಶ ವಿನ್ಯಾಸಕ
ಅರುಣ್ ಕೇಲ್ ಹೇಳಿದ್ದಾರೆ. ಶಿವಾಜಿ ಶೈಲಿಯಲ್ಲಿ ಗಡ್ಡ ವಿನ್ಯಾಸ ಮಾಡುವುದಕ್ಕೆ 50 -100 ರೂ ಪಡೆಯುವುದಾಗಿ ಸಲೂನ್ ನ ಮಾಲೀಕ ಅನಿಲ್ ಕೇಲ್ ತಿಳಿಸಿದ್ದಾರೆ.