ರಾಜ್ಯ

ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮತ್ತೆ ಇಬ್ಬರ ಬಂಧನ

Manjula VN

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಸೋಮವಾರ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆ.ನಾಗೇಂದ್ರ (37) ಹಾಗೂ ತಿಮ್ಮೇಗೌಡ ಅಲಿಯಾಸ್ ಅರವೆಗೌಡ (37) ಬಂಧಿತ ಅರೋಪಿಗಳು. ಇಬ್ಬರು ಪಿಹೆಚ್ ಡಿ ವಿದ್ಯಾರ್ಥಿಗಳಾಗಿದ್ದು, ಮಾ.21ಕ್ಕೆ 2ನೇ ಬಾರಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣದಲ್ಲಿ ಇವರಿಬ್ಬರೂ ಪ್ರಮುಖ ಪಾತ್ರಧಾರಿಗಳಾಗಿದ್ದರು ಎಂದು ಹೇಳಲಾಗುತ್ತಿದೆ.

ಬಂಧಿತ ಆರೋಪಿಗಳನ್ನು ಸಿಐಡಿ ಆಧಿಕಾರಿಗಳು ನಿನ್ನೆ ನ್ಯಾಯಾಲಯದ ಬಳಿ ಹಾಜರುಪಡಿಸಿದ್ದರು. ಇದರಂತೆ ಇಬ್ಬರನ್ನು ನ್ಯಾಯಾಲಯ ಏ.25ರವರೆಗೆ ಸಿಐಡಿ ವಶಕ್ಕೆ ನೀಡಿದೆ. ಈ ಇಬ್ಬರು ಆರೋಪಿಗಳ ಬಂಧನದಂತೆ ಇದೀಗ ಪ್ರಕರಣ ಸಂಬಂಧ ಬಂಧನಕ್ಕೊಳಗಾದವರ ಸಂಖ್ಯೆ 10ಕ್ಕೆ ಏರಿಕತೆಯಾಗಿದೆ.

ಇದೀಗ ಬಂಧಿರಾಗಿರುವ ಇಬ್ಬರು ಆರೋಪಿಗಳು ಪ್ರಕರಣದ ಕಿಂಗ್ ಪಿನ್ ಎಂದೇ ಹೇಳಲಾಗುವ ಶಿವಕುಮಾರನೊಂದಿಗೆ ಆಪ್ತವಾಗಿ ಒಡನಾಟದಲ್ಲಿದ್ದರು ಹೇಳಲಾಗುತ್ತಿದ್ದು, ಈ ಸ್ನೇಹದ ಹಿನ್ನೆಲೆಯಲ್ಲಿ ಹಣಕ್ಕಾಗಿ ಇವರಿಬ್ಬರೂ ಶಿವಕುಮಾರ ಸ್ವಾಮಿ ತಂಡದ ಜತೆ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳು ಕಿಂಗ್ ಪಿನ್ ಶಿವಕುಮಾರನ ಮೊಬೈಲ್ ಕರೆಗಳ ಮಾಹಿತಿ ಪಡೆದಾಗ ಆರೋಪಿಗಳು ಆತನೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಈ ಮಾಹಿತಿ ಆಧರಿಸಿ ನಿನ್ನೆ ಇಬ್ಬರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ನಾಗೇಂದ್ರ ಮೈಸೂರಿನ ಶ್ರೀರಾಮಪುರದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯುವ ವೇಳೆ ನೆಲೆಸಿದ್ದ, ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಯೋಕೆಮೆಸ್ಟ್ರಿಯಲ್ಲಿ ಪಿಹೆಚ್ ಡಿ ಗಾಗಿ ನೋಂದಣಿ ಮಾಡಿಕೊಂಡಿದ್ದ. ರಾಜಾಜಿನಗರದಲ್ಲಿ ಇಂಟೆಲೆಕ್ಚೂಯಲ್ ಕರೆಸ್ಟಾಂಡೆಂಟ್ ಕಾಲೇಜ್ ಎಂಬ ಸಂಸ್ಥೆಯಲ್ಲಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ಇನ್ನು ಆರೋಪಿ ತಿಮ್ಮೇಗೌಡ ಮೈಸೂರಿನ ನಿವಾಸಿಯಾಗಿದ್ದು, ಅರ್ಥಶಾಸ್ತ್ರ ವಿಭಾಗದಲ್ಲಿ ಪಿಹೆಚ್ ಡಿ ಗಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡಿಕೊಂಡಿದ್ದ. ಆದರೆ, ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನಾಗೇಂದ್ರ ಅವರೊಂದಿಗೆ ವಾಸ ಮಾಡುತ್ತಿದ್ದ.

SCROLL FOR NEXT