ರಾಜ್ಯ

ಪ್ರತಿಭಟನಾ ನಿರತ ಶಿಕ್ಷಕರ ಮಣಿಸಲು ಸರ್ಕಾರದ ದುಸ್ಸಾಹಸ!

Srinivasamurthy VN

ಬೆಂಗಳೂರು: ಸರ್ಕಾರದ ಮಾತಿಗೆ ಕಿಮ್ಮತ್ತು ನೀಡದ ಪ್ರತಿಭಟನಾ ನಿರತ ಶಿಕ್ಷಕರನ್ನು ಮಣಿಸಲು ಖಾಸಗಿ ಕಾಲೇಜುಗಳ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ  ಸರ್ಕಾರ ದುಸ್ಸಾಹಸಕ್ಕೆ ಮುಂದಾಯಿತೆ ಎಂಬ ಪ್ರಶ್ನೆ ಮೂಡುತ್ತಿದೆ.

ನಿಗದಿತ ಸಮಯದಲ್ಲಿ ಮೌಲ್ಯಮಾಪನ ಮಾಡಿಮುಗಿಸುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮವನ್ನು ಒಪ್ಪಬಹುದಾದರೂ ಖಾಸಗಿ ಕಾಲೇಜುಗಳ ಮೌಲ್ಯಮಾಪಕರಿಂದ ಪರಿಣಾಮಕಾರಿ  ಮೌಲ್ಯಮಾಪನ ನಡೆಯುತ್ತದೆಯೇ ಎಂಬ ಅನುಮಾನ ಕೂಡ ಈಗ ಹುಟ್ಟಿಕೊಂಡಿದೆ. ಪ್ರತಿ ವರ್ಷ ನುರಿತ ಪಿಯು ಉಪನ್ಯಾಸಕರಿಂದಲೇ ಮೌಲ್ಯಮಾಪನ ನಡೆಯುತ್ತಿದ್ದರೂ ಅಂಕಗಳ  ಒಟ್ಟುಗೂಡಿಸುವಿಕೆ ಅಥವಾ ಅಂಕಗಳನ್ನೇ ನೀಡದಿರುವ ಪ್ರಕರಣಗಳು ಮಾತ್ರ ಕಮ್ಮಿಯಾಗಿಲ್ಲ. ಕಳೆದ ವರ್ಷ ಈ ರೀತಿ ತಪ್ಪು ಮಾಡಿದ ಸಾವಿರಕ್ಕೂ ಹೆಚ್ಚಿನ ಮೌಲ್ಯಮಾಪಕರಿಗೆ ದಂಡ  ವಿಧಿಸಲಾಗಿತ್ತು. ಈ ಪೈಕಿ ಹೆಚ್ಚು ತಪ್ಪೆಸಗಿದವರ ಮೇಲೆ ತನಿಖೆಯನ್ನೂ ನಡೆಸಲಾಗಿತ್ತು.

ಇಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ಮೌಲ್ಯಮಾಪನ ಮಾಡುವ ಖಾಸಗಿ ಶಿಕ್ಷಕರಿಂದ ಪರಿಣಾಮಕಾರಿ ಮೌಲ್ಯಮಾಪನ ನಡೆಯುತ್ತದೆಯೇ? ಸರ್ಕಾರದ ಈ ಕ್ರಮ ಒಂದು ರೀತಿಯಲ್ಲಿ ಗೊಂದಲ  ಹಾಗೂ ವಿದ್ಯಾರ್ಥಿಗಳಲ್ಲಿ ಗಾಬರಿ ಕೂಡ ಉಂಟುಮಾಡಿದೆ. ಖಾಸಗಿ ಉಪನ್ಯಾಸಕ ರಿಂದ ಪಿಯು ಮೌಲ್ಯಮಾಪನ ಮಾಡಿಸಲು ಪಿಯು ಇಲಾಖೆ ಮೊದಲ ಬಾರಿಗೆ ‘ಮಾದರಿ ಉತ್ತರ ಪತ್ರಿಕೆ’ (ಸ್ಕೀಂ  ಆಫ್ ಇವ್ಯಾಲ್ಯುವೇಷನ್) ಬದಲಾಯಿಸಿದೆ. ಇದರಿಂದಾಗಿ ಪಿಯು ಉತ್ತರ ಪತ್ರಿಕೆಗಳನ್ನು ಉಪನ್ಯಾಸಕರು ಮಾತ್ರವಲ್ಲ ಸಾಮಾನ್ಯ ಪ್ರಜೆ ಕೂಡ ಮೌಲ್ಯಮಾಪನ ಮಾಡಬಹುದಾಗಿದೆ ಎಂದು  ಪತ್ರಿಕೆಯೊಂದು ವರದಿ ಮಾಡಿದೆ.

ಪಿಯು ಉಪನ್ಯಾಸಕರ ಬದಲಿಗೆ ಖಾಸಗಿ ಉಪನ್ಯಾಸಕರು ಅಥವಾ ಸ್ನಾತಕೋತ್ತರ ಪದವಿ ಮುಗಿಸಿರುವ ಪ್ರೌಢಶಾಲಾ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವುದರಿಂದ  ಅವರಿಗೆ ಸುಲಭವಾಗಿ ಅರ್ಥೈಸುವುದಕ್ಕಾಗಿ ಮೌಲ್ಯಮಾಪಕರಿಗೆ ನೀಡುವ ಮಾದರಿ ಉತ್ತರ ಪತ್ರಿಕೆ ಸ್ವರೂಪವನ್ನು ಶಿಕ್ಷಣ ಇಲಾಖೆ ಬದಲಾಯಿಸಿದೆ.  ಇಷ್ಟು ವರ್ಷ ಒಂದು ಪ್ರಶ್ನೆಗೆ ಸರಿಯಾದ  ಒಂದು ಉತ್ತರವನ್ನು ಮಾತ್ರ ಮಾದರಿ ಉತ್ತರ ಪತ್ರಿಕೆಯಲ್ಲಿ ನೀಡಲಾಗುತ್ತಿತ್ತು. ಈ ವರ್ಷ ಬೇರೆ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸುತ್ತಿರುವುದರಿಂದ ಅವರಿಗೆ ಅರ್ಥವಾಗಲಿ ಎಂಬ  ಒಂದೇ ಉದ್ದೇಶದಿಂದ ಮೊದಲ ಬಾರಿಗೆ ಪ್ರಶ್ನೆಗೆ ಸಂಬಂಧಿಸಿದ ಎಲ್ಲ ಉತ್ತರಗಳನ್ನು ಮಾದರಿ ಉತ್ತರ ಪತ್ರಿಕೆಯಲ್ಲಿ ಮುದ್ರಿಸಿ ನೀಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ  ಉನ್ನತ ಮೂಲಗಳು ತಿಳಿಸಿವೆ.

ಹೀಗಾಗಿ ಮಾದರಿ ಉತ್ತರ ಪತ್ರಿಕೆಗಳಲ್ಲಿ ಇರುವ ಉತ್ತರವನ್ನೇ ವಿದ್ಯಾರ್ಥಿಗಳು ಬರೆಯಬೇಕು ಎಂದರೆ ಕಷ್ಟ. ಉತ್ತರಕ್ಕೆ ಹತ್ತಿರವಿರುವ ಮತ್ತೊಂದು ಉತ್ತರ ಬರೆದಿದ್ದರೂ ಹೊಸ  ಮೌಲ್ಯಮಾಪಕರಿಗೆ ಗೊಂದಲವಾಗುವುದು ಸಹಜ. ಎಷ್ಟು ಅಂಕ ನೀಡಬೇಕು ಅಥವಾ ನೀಡಬಾರದು ಎಂಬ ಗೊಂದಲ ನಿವಾರಣೆಗಾಗಿ ಒಂದು ಪ್ರಶ್ನೆಗೆ ಹಲವಾರು ಮಾದರಿಯ ಉತ್ತರಗಳನ್ನು  ಈ ಮಾದರಿ ಉತ್ತರ ಪತ್ರಿಕೆಯಲ್ಲಿ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಉತ್ತರ ಬರೆದಿದ್ದರೂ ಸುಲಭವಾಗಿ ಅಂಕ ನೀಡಲು ಸಾಧ್ಯವಾಗುತ್ತದೆ ಎಂದು  ಹೇಳಲಾಗುತ್ತಿದೆ.

ಒಟ್ಟಾರೆ ಸರ್ಕಾರದ ಈ ಕ್ರಮ ಕೇವಲ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೇ ಪೋಷಕುರ ಸೇರಿದಂತೆ ಶಿಕ್ಷಕರಲ್ಲೂ ಆತಂಕಕ್ಕೆ ಕಾರಣವಾಗಿದೆ.

SCROLL FOR NEXT