ರಾಜ್ಯ

ಶಿಕ್ಷಕರ ಪ್ರತಿಭಟನೆಯ ನಡುವೆಯೇ ಮೌಲ್ಯಮಾಪನ ಆರಂಭ

Srinivasamurthy VN

ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ಎಚ್ಚರಿಕೆಯ ನಡುವೆಯೂ ಶಿಕ್ಷಕರು ಪ್ರತಿಭಟನೆ ಮುಂದುವರೆಸಿರುವಂತೆಯೇ ಖಾಸಗಿ ಶಿಕ್ಷಕರ ಮೂಲಕ ಸೋಮವಾರದಿಂದ ಸರ್ಕಾರ  ಮೌಲ್ಯಮಾಪನಕ್ಕೆ ಚಾಲನೆ ನೀಡಿದೆ.

ಸತತ 12 ದಿನಗಳ ಬಳಿಕ ಶಿಕ್ಷಣ ಇಲಾಖೆ ಮೌಲ್ಯಮಾಪನ ಆರಂಭಿಸುವುದರಲ್ಲಿ ಯಶಸ್ವಿಯಾಗಿದ್ದು, 46 ಮೌಲ್ಯಮಾಪನ ಕೇಂದ್ರಗಳ ಪೈಕಿ 39 ಕೇಂದ್ರಗಳಲ್ಲಿ ಸೋಮವಾರದಿಂದ  ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದೆ. ಬೆಂಗಳೂರಿನ ಮಲ್ಲೇಶ್ವರದ ಮೌಲ್ಯಮಾಪನ ಕೇಂದ್ರ ಸೇರಿದಂತೆ ಒಟ್ಟು 21 ಕೇಂದ್ರಗಳಲ್ಲಿ  ಕೋಡಿಂಗ್ ಕಾರ್ಯ ಆರಂಭವಾಗಿದ್ದು, 6  ಕೇಂದ್ರಗಳಲ್ಲಿ ಈಗಾಗಲೇ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಪಿಯು ಇಲಾಖೆ ನಿರ್ದೇಶಕರಾದ ರಾಮೇಗೌಡ ಅವರು, ಕೋಡಿಂಗ್ ಮತ್ತು ಡಿ ಕೋಡಿಂಗ್ ಕೇಂದ್ರಗಳಲ್ಲಿ ಎಲ್ಲ ಕಾರ್ಯ ಮುಕ್ತಾಯವಾಗಿದೆ. ಮಂಗಳವಾರದಿಂದ  ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಯಾರು ಮೌಲ್ಯಮಾಪನ ನಡೆಸುತ್ತಾರೆ ಎಂಬುದರ ಬಗ್ಗೆ ಎರಡು ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ತಿಳಿಸಿದ್ದಾರೆ. ಇಲಾಖೆಯ ಮೂಲಗಳ ಪ್ರಕಾರ  ಈಗಾಗಲೇ ಸುಮಾರು 5 ಸಾವಿರಕ್ಕೂ ಅಧಿಕ ಶಿಕ್ಷಕರು ಮೌಲ್ಯಮಾಪನಕ್ಕೆ ಹಾಜರಾಗಿದ್ದು, ಇಂದಿನಿಂದ ಮತ್ತಷ್ಟು ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳಲ್ಲಿದ್ದಾರೆ ಎಂದು  ಹೇಳಲಾಗುತ್ತಿದೆ.

‘ರಾಜ್ಯದ 200ಕ್ಕೂ ಹೆಚ್ಚು ಕೇಂದಗಳಲ್ಲಿ ಮೌಲ್ಯಮಾಪನ ಕಾರ್ಯ ಯಾವುದೇ ತಡೆ ಇಲ್ಲದೆ ನಡೆದಿದೆ. 58,169 ಮೌಲ್ಯಮಾಪಕರು ಸೋಮವಾರ ಹಾಜರಾಗಬೇಕಿತ್ತು. ಮೊದಲ ದಿನವೇ  ಸುಮಾರು 12 ಸಾವಿರ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ಅಂಥವರಿಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ  ಬೋಪಣ್ಣ ತಿಳಿಸಿದರು.

ಶಿಕ್ಷಕರೊಂದಿಗೆ ಕಿಮ್ಮನೆ ಸಂಧಾನ ಸಭೆ
ಈ ಹಿಂದೆ ಪ್ರತಿಭಟನಾ ನಿರತರೊಂದಿಗೆ ಯಾವುದೇ ರೀತಿಯ ಸಭೆ ನಡೆಸುವುದಿಲ್ಲ ಎಂದು ಖಾರವಾಗಿ ಹೇಳಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಸೋಮವಾರ ಶಿಕ್ಷಕರೊಂದಿಗೆ ಸಭೆ  ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ ಶಿಕ್ಷಕರನ್ನು ಕಚೇರಿಗೆ ಕರೆಸಿಕೊಂಡ ಸಚಿವರು ಪ್ರತಿಭಟನಾ ನಿರತ ಶಿಕ್ಷಕರಿಗೆ ಬೇಡಿಕೆ ಈಡೇರಿಕೆ ಕುರಿತು ಆಶ್ವಾಸನೆ ನೀಡಿದ್ದಾರೆ.  ಅಲ್ಲದೆ ಶಿಕ್ಷಕರ ಬೇಡಿಕೆಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ಪ್ರತಿಭಟನಾ ನಿರತರಿಗೆ ನೋಟಿಸ್
ಬೆಳಗ್ಗೆ ಶಿಕ್ಷಕರೊಂದಿಗೆ ಸಂಧಾನಸಭೆ ನಡೆಸಿದ್ದ ಸಚಿವ ಕಿಮ್ಮನೆ ರತ್ನಾಕರ ಮದ್ಯಾಹ್ನದ ಹೊತ್ತಿಗೆ ಪಿಯು ಇಲಾಖೆಗೆ ಭೇಟಿ ನೀಡಿ ಪ್ರತಿಭಟನಾ ನಿರತರಿಗೆ ದಿಢೀರ್ ನೋಟಿಸ್ ನೀಡುವ ಮೂಲಕ  ಅಚ್ಚರಿ ಮೂಡಿಸಿದರು. ಕರ್ತವ್ಯಕ್ಕೆ ಹಾಜರಾಗುವಂತೆ ಇಲ್ಲವೇ ಕಠಿಣ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ಜಾರಿ ಮಾಡಿ ಅಚ್ಚರಿಗೆ ಕಾರಣವಾದರು. ಮೌಲ್ಯಮಾಪನ ಬಹಿಷ್ಕರಿಸಿರುವ ಸುಮಾರು  14 ಸಾವಿರ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಆರಂಭ
ರಾಜ್ಯದ 218 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಆರಂಭವಾಗಿದೆ. ಕೆಲ ಕೇಂದ್ರಗಳಲ್ಲಿ ಸಂಘಟನೆಗಳು ಮೌಲ್ಯಮಾಪನಕ್ಕೆ ಅಡ್ಡಿಪಡಿಸಿದ ಘಟನೆಗಳು  ನಡೆದಿವೆ. 58,169 ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, 45,550 ಮಂದಿ ಹಾಜರಾಗಿದ್ದಾರೆ. ಗೈರು ಹಾಜರಾದವರಿಗೆ ನೋಟಿಸು ಜಾರಿಗೆ ಮಾಡಲಾಗಿದೆ.

SCROLL FOR NEXT