ರಾಜ್ಯ

ಗ್ರಾಹಕರಿಗೆ ಮರುಪಾವತಿ ಮಾಡಲು ಮ್ಯಾಕ್ಸ್ ವರ್ಥ್ ಗೆ ಗ್ರಾಹಕ ನ್ಯಾಯಾಲಯ ಆದೇಶ

Sumana Upadhyaya

ಬೆಂಗಳೂರು: ಲ್ಯಾಂಡ್ ಡೆವಲಪರ್ ನಿಂದ ಹಣ ಮರುಪಾವತಿಯಾಗದೆ ಗ್ರಾಹಕ ನ್ಯಾಯಾಲಯದಲ್ಲಿ ಮಹಿಳೆಗೆ ನ್ಯಾಯ ದೊರಕಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ವಿಜಯನಗರ ಚಂದ್ರಾ ಲೇ ಔಟ್ ನ ನಿವಾಸಿ ಪುಷ್ಪವತಿಗೆ ಮುಂಗಡ ಪರಿಹಾರವಾಗಿ 10 ಲಕ್ಷ ರೂಪಾಯಿ ಮತ್ತು ದಾವೆ ವೆಚ್ಚವಾಗಿ 5 ಸಾವಿರ ರೂಪಾಯಿ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ನಿವಾರಣಾ ವೇದಿಕೆಯ ಅಧ್ಯಕ್ಷ ಹೆಚ್.ಎಸ್. ರಾಮಕೃಷ್ಣ ಮತ್ತು ಸದಸ್ಯ ಎಲ್.ಮಮತಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಬೆಂಗಳೂರಿನ ನೆಹರೂ ನಗರದಲ್ಲಿರುವ ಮ್ಯಾಕ್ಸ್ ವರ್ಥ್ ರಿಯಾಲ್ಟಿ ಇಂಡಿಯಾ ಲಿಮಿಟೆಡ್ ಗೆ ಫೆಬ್ರವರಿ 27, 2013ರಿಂದ ವಾರ್ಷಿಕ ಶೇಕಡಾ 18ರಷ್ಟು ಬಡ್ಡಿ ಮೊತ್ತವನ್ನು ಕಟ್ಟಬೇಕೆಂದು ಹೇಳಿದೆ.

ಮ್ಯಾಕ್ಸ್ ವರ್ಥ್ ರಿಯಾಲ್ಟಿ ಸೇವೆಯನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕೂಡ ಹೇಳಿದೆ. ಪುಷ್ಪವತಿಯವರು ಮಾನಸಿಕ ಯಾತನೆ ಅನುಭವಿಸಿದ್ದಕ್ಕಾಗಿ ಪ್ರತಿ ಸೈಟ್ ಗೆ 1 ಲಕ್ಷದಂತೆ ಮತ್ತು ದಾವೆ ವೆಚ್ಚವಾಗಿ 5 ಸಾವಿರ ರೂಪಾಯಿ ನೀಡುವಂತೆ ಹೇಳಿದೆ.

ಬಿಲ್ಡರ್ ಗಳು ಗ್ರಾಹಕರ ಪರ ಸೈಟ್ ಗಳನ್ನು ದಾಖಲಿಸಲು ವಿಫಲರಾದಲ್ಲಿ ಮುಂಗಡ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕು. ಒಪ್ಪಂದದ ವೇಳೆ ಭರವಸೆ ನೀಡಿದಂತೆ ಮ್ಯಾಕ್ಸ್ ವರ್ಥ್ ಕಂಪೆನಿ ಮಾರಾಟ ಪತ್ರ ಕಾರ್ಯಗತಗೊಳಿಸಲು ವಿಫಲವಾಗಿತ್ತು.

ಹಿನ್ನಲೆ: ಪುಷ್ಪವತಿಯವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ತಿಂಡ್ಲು ಗ್ರಾಮದಲ್ಲಿ ಮ್ಯಾಕ್ಸ್ ವರ್ಥ್ ನವರ ಉದ್ದೇಶಿತ ವಸತಿ ಲೇಔಟ್ ನಲ್ಲಿ 10 ಸೈಟುಗಳನ್ನು 3 ಲಕ್ಷದ 6 ಸಾವಿರ ರೂಪಾಯಿ ಮುಂಗಡ ಹಣ ನೀಡಿ 2013, ಮಾರ್ಚ್ 14ರಂದು ಕಾಯ್ದಿರಿಸಿದ್ದರು. ಪ್ರತಿ ಸೈಟ್ ನ ಮೊತ್ತ 10 ಲಕ್ಷದ 20 ಸಾವಿರ ರೂಪಾಯಿಗಳಾಗಿತ್ತು.

ಸರ್ಕಾರದಿಂದ ಮತ್ತು ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮೋದನೆ ಸಿಕ್ಕಿದ ಮೇಲೆ ಕ್ರಯ ಪತ್ರವನ್ನು ಮಾಡುವುದಾಗಿ ಕಂಪೆನಿ ಹೇಳಿತ್ತು. ಪುಷ್ಪವತಿಯವರು ಮುಂಗಡ ಹಣ ನೀಡಿದ ಬಳಿಕ ಕ್ರಯ ಪತ್ರ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಇತ್ತು. ಈ ನಡುವೆ ಪುಷ್ಪವತಿಗೆ 2014, ಮಾರ್ಚ್ 25ರಂದು ಇ ಮೇಲ್ ಕಳುಹಿಸಿದ ಕಂಪೆನಿ  ಕ್ರಯ ಪತ್ರದ ಕರಡನ್ನು ಸದ್ಯದಲ್ಲಿಯೇ ನೀಡಲಿದ್ದು, 10 ಸೈಟ್ ಗಳ ಬೆಲೆ 83 ಲಕ್ಷದ 29 ಸಾವಿರ ರೂಪಾಯಿಗಳನ್ನು 48 ಗಂಟೆಗಳೊಳಗೆ ಪಾವತಿ ಮಾಡುವಂತೆ ಹೇಳಿತ್ತು. ಆದರೆ ಸೇಲ್ ಡೀಡ್ ಸಿಗಲಿಲ್ಲವೆಂದು ಪುಷ್ಪವತಿ ಕಳುಹಿಸಿದ್ದ ಲೀಗಲ್ ನೊಟೀಸ್ ಗೆ ಕಂಪೆನಿ ಉತ್ತರಿಸಲಿಲ್ಲ.

ಲೇ ಔಟ್ ಪ್ರಾಜೆಕ್ಟ್ ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಆಗಲಿಲ್ಲ ಎಂದು ಮ್ಯಾಕ್ಸ್ ವರ್ಥ್ ರಿಯಾಲ್ಟಿಯ ಉಪ ಪ್ರಧಾನ ವ್ಯವಸ್ಥಾಪಕ ರೂಪೇಶ್ ಸುಲೆಗೈ ಒಪ್ಪಿಕೊಂಡಿದ್ದರು. ಅರ್ಕಾವತಿ ಮತ್ತು ಕುಮುದಾವತಿ ನದಿ ಪಾತ್ರದಲ್ಲಿ ಬರುವುದರಿಂದ ಈ ಕೇಸು ಹೈಕೋರ್ಟ್ ನಲ್ಲಿ ವಿವಾದದಲ್ಲಿರುವುದರಿಂದ ಅನುಮೋದನೆ ಸಿಗುವಲ್ಲಿ ವಿಳಂಬವಾಗುತ್ತಿಗೆ ಎಂದರು.

''ನಾವು ಮುಂಗಡ ಹಣವನ್ನು ಮರುಪಾವತಿ ಮಾಡಲು ಸಿದ್ದರಿದ್ದೇವೆ. ಆದರೆ ಪುಷ್ಪಾವತಿಯವರು ಬಡ್ಡಿ ಸಮೇತ ಹಣ ವಾಪಸ್ಸು ಮಾಡಲು ಬೇಡಿಕೆಯಿಟ್ಟಿದ್ದಾರೆ. ನಮ್ಮ ಕಂಪೆನಿಯ ನಿಯಮ ಪ್ರಕಾರ, ಗ್ರಾಹಕರು ಸೈಟ್ ಬುಕಿಂಗ್ ನ್ನು ರದ್ದುಗೊಳಿಸಿದರೆ ಬಡ್ಡಿ ಹಣವನ್ನು ಕಂಪೆನಿ ನೀಡುವುದಿಲ್ಲ. ಎಂದರು ರೂಪೇಶ್.

ಬೇರೆ ಮ್ಯಾಪ್:  ಮಾರ್ಚ್ 13, 2014ರಂದು ಕಂಪೆನಿ ಕಳುಹಿಸಿದ ಲೇ ಔಟ್ ಮ್ಯಾಪ್ ಸರ್ಕಾರದಿಂದ ಅಥವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮೋದನೆಗೊಂಡದ್ದಲ್ಲ. ಕಂಪೆನಿಯೇ ರಚಿಸಿದ ಮ್ಯಾಪ್. ಮತ್ತೊಮ್ಮೆ ಕಂಪೆನಿ ಕಳುಹಿಸಿದ ಮ್ಯಾಪ್ ಬೇರೆಯೇ ಸೈಟ್ ನಂಬರ್ ದ್ದು. ಅದು ಕೂಡ ಸರ್ಕಾರದಿಂದ ಅನುಮೋದನೆಗೊಂಡಿರಲಿಲ್ಲ ಎಂದು ಪುಷ್ಪವತಿ ತಿಳಿಸಿದ್ದಾರೆ.

SCROLL FOR NEXT