ಬೆಂಗಳೂರು: ಪರಿಶಿಷ್ಟ ಜಾತಿ(ಎಸ್ ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ ಟಿ)ಗಳಿಗೆ ರು.50 ಲಕ್ಷಕ್ಕಿಂತ ಕಡಿಮೆ ಅಂದಾಜು ವೆಚ್ಚದ ಸರ್ಕಾರಿ ಕಾಮಗಾರಿಗಳ ಟೆಂಡರ್ ಗಳ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಎಸ್ ಸಿಗೆ ಶೇ.17.15ರಷ್ಟು ಹಾಗೂ ಎಸ್ ಟಿಗೆ ಶೇ.6.85ರಷ್ಟು ಮೀಸಲಾತಿಯನ್ನು ಸರ್ಕಾರಿ ಟೆಂಡರ್ ಗಳಲ್ಲಿ ನಿಗದಿಪಡಿಸಲಾಗಿದೆಯೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿಬಿ ಜಯಚಂದ್ರ ಬುಧವಾರ ತಿಳಿಸಿದ್ದಾರೆ.
ಸಚಿವ ಸಂಪುಟದ ಸಭೆ ಬಳಿಕ ಮಾತನಾಡಿದ ಅವರು, ರು.50 ಲಕ್ಷಕ್ಕಿಂತ ಕಡಿಮೆ ಕಾಮಗಾರಿ ಅಥವಾ ಇನ್ನಾವುದೇ ವ್ಯವಹಾರದ ಟೆಂಡರ್ ಗಳನ್ನು ನೀಡಲು ಅನುಕೂಲವಾಗುವಂತೆ ಕರ್ನಾಟಕ ಪಾರದರ್ಶಕ ಕಾಯ್ದೆ ಗೆ ತಿದ್ದುಪಡಿ ತರಲು ಸಂಪುಟ ಸಭೆ ನಿರ್ಧರಿಸಿದೆ. ತಿದ್ದುಪಡಿ ವೇಳೆ ವಿಸ್ತ್ರೃತವಾದ ನಿಯಮಾವಳಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಾಯಿಂದ ಹಾಗೂ ಹಜಾಮ ಸಮುದಾಯಗಳ ಬಳಕೆಯನ್ನು ಕೈಬಿಟ್ಟು ಇನ್ನು ಮುಂದೆ ಈ ಸಮಾಜಗಳಿಗೆ ಸವಿತಾ ಸಮಾಜ ಎಂಬ ಪ್ರಮಾಣಪತ್ರಗಳನ್ನು ನೀಡುವಂತೆ ಸಂಪುಟ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.