ಬೆಂಗಳೂರು: ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಸಭೆಯಲ್ಲಿ ಆಸ್ತಿ ತೆರಿಗೆ ಏರಿಕೆ ವಿರೋಧಿಸಿ ಬಿಜೆಪಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದ್ದರ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದು ಬಿಬಿಎಂಪಿ ಸಭೆ ಅಕ್ಷರಶಃ ರಣಾಂಗಣವಾಯಿತು.
ಕೆಳ ಮತ್ತು ಮಧ್ಯಮ ವರ್ಗದ ಜನತೆಗೆ ತೆರಿಗೆ ಹೆಚ್ಚಳ ಮಾರಕವಾಗಿದ್ದು, ಕೂಡಲೇ ಆಸ್ತಿ ತೆರಿಗೆಯನ್ನು ರದ್ದುಪಡಿಸಬೇಕೆಂದು ಪ್ರತಿಪಕ್ಷದ ಬಿಜೆಪಿ ಸದಸ್ಯರು ಆಗ್ರಹಪಡಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಡೀ ಸಭೆ ಕೆಲ ಕಾಲ ಗೊಂದಲ, ಕೋಲಾಹಲದಲ್ಲಿ ಮುಳುಗಿತ್ತು.
ಟೋಪಿ, ಕಂಬಳಿ, ದಿಂಬು ಹಿಡಿದು ವಿಭಿನ್ನ ವೇಷದೊಂದಿಗೆ ಕೌನ್ಸಿಲ್ ಸಭೆಗೆ ಆಗಮಿಸಿದ ಬಿಜೆಪಿ ಸದಸ್ಯರು ತೆರಿಗೆ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮೇಯರ್ ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಸದಸ್ಯರೂ ಕೆಲಕಾಲ ಗರಂ ಆದರು. ಪರಿಣಾಮ ಸಭೆ ಆವರಣದಲ್ಲಿಯೇ ಗದ್ದಲದ ಜತೆ ಜೊತೆಗೇ ನೂಕಾಟ, ತಳ್ಳಾಟವೂ ನಡೆಯಿತು. ಕೋಪಗೊಂಡ ಮೇಯರ್ ಮಂಜುನಾಥ್ ಗದ್ದಲ ಮಾಡುತ್ತಿದ್ದಾರೆನ್ನುವ ಕಾರಣಕ್ಕೆ ವಿಪಕ್ಷ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ನಾಲ್ವರು ಬಿಜೆಪಿ ಸದಸ್ಯರನ್ನು ಅಮಾನತು ಗೊಳಿಸಿದ್ದಾರೆ.
ತಳ್ಳಾಟ, ನೂಕಾಟದ ನಡುವೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಒಂದು ಹಂತದಲ್ಲಿ ಕುಸಿದು ಬಿದ್ದ ಘಟನೆಯೂ ನಡೆಯಿತು.