ಬೆಂಗಳೂರು: ವೇಗದ ಮತ್ತು ನಿರ್ಲಕ್ಷದ ಚಾಲನೆಯಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಶುಕ್ರವಾರ ಡಾ.ಎನ್ ಎಸ್ ಶಂಕರ್ ಗೆ ಜಾಮೀನು ಮಂಜೂರು ಮಾಡಿದೆ.
ಡಾ.ಶಂಕರ್ ಗೆ ಸೆಷನ್ಸ್ ನ್ಯಾಯಾಲಯ ಏಪ್ರಿಲ್ 7ರಂದು ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ್ದಾರೆ.
ಕಳೆದ ಮಾರ್ಚ್ 27ರಂದು ಅಪರಾಹ್ನ ಸುಮಾರು 2 ಗಂಟೆಗೆ ಶಂಕರ್ ತಮ್ಮ ಮರ್ಸಿಡಿಸ್ ಬೆಂಜ್ ಕಾರನ್ನು ಬೇಕಾಬಿಟ್ಟಿಯಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರು.
ಕಾರು ಜಯನಗರ ಸಮೀಪ ಮಾಧವನ್ ಪಾರ್ಕ್ ಹತ್ತಿರ ಕಾರೊಂದಕ್ಕೆ ಢಿಕ್ಕಿ ಹೊಡೆದು ಅದರಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡಿದ್ದರು. ಆದರೆ ಶಂಕರ್ ತಮ್ಮ ಕಾರನ್ನು ನಿಲ್ಲಿಸಲಿಲ್ಲ. ಮತ್ತೆ ಅಜಾಗರೂಕತೆಯಿಂದ ಚಲಾಯಿಸಿ ಭೈರಸಂದ್ರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಮತ್ತೊಂದು ಕಾರಿಗೆ ಹೋಗಿ ಡಿಕ್ಕಿ ಹೊಡೆಯಿತು. ಕಾರು ಢಿಕ್ಕಿ ಹೊಡೆದಿದ್ದರಿಂದ ಜಯನಗರ ಆಂಜನೇಯ ದೇವಸ್ಥಾನದ ಮುಂದೆ ನಿಂತಿದ್ದ ಅಹಮದ್ ಖಾನ್, ಅವರ ಪತ್ನಿ ಮೌಸಿನಾ ಖಾನುಂ ಅವರಿಗೆ ಢಿಕ್ಕಿ ಹೊಡೆಯಿತು. ಅಹಮದ್ ಖಾನ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ ಮೌಸಿನಾ ಅವರಿಗೆ ಗಂಭೀರ ಗಾಯಗಳಾಗಿದ್ದವು.
ಕೂಡಲೇ ಅಲ್ಲಿ ಸಾರ್ವಜನಿಕರು ಜಮಾಯಿಸಿ ಶಂಕರ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಅವರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.