ರಾಜ್ಯ

ಇನ್ನೂ ನಡೆದಿಲ್ಲ ವಿಐಪಿ ಆರೋಪಿಗಳ ವಿಚಾರಣೆ: ಹಳ್ಳ ಹಿಡಿಯುತ್ತಾ ಗಣಪತಿ ಆತ್ಮಹತ್ಯೆ ಕೇಸ್?

Shilpa D

ಬೆಂಗಳೂರು: ಮಂಗಳೂರು ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಮಾಡಿಕೊಂಡು ಸುಮಾರು 1 ತಿಂಗಳು ಆಗುತ್ತಿದೆ. ಇದುವರೆಗೂ ಒಬ್ಬನೇ ಒಬ್ಬ ತನಿಖಾಧಿಕಾರಿ ಪ್ರಕರಣ ಸಂಬಂಧ ಯಾರೋಬ್ಬರನ್ನು  ವಿಚಾರಣೆಗೊಳಪಡಿಸಿಲ್ಲ.

ಇಬ್ಬರು ಐಪಿಎಸ್ ಅಧಿಕಾರಿಗಳು ಹಾಗೂ ಸಚಿವರಾಗಿದ್ದ ಜಾರ್ಜ್ ಹೆಸರು ಹೇಳಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು.  ಜಾರ್ಜ್ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದು ಮಡಿಕೇರಿ ನ್ಯಾಯಾಲಯ ಆದೇಶಿಸಿತ್ತು.

ಎ. ಎಂ ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿ ಇಬ್ಬರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಾಗಿರುವುದರಿಂದ ತನಿಖಾಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಲು ಹಿಂದೇಟು ಹಾಕುತ್ತಿದ್ದಾರೆ.

ಜುಲೈ 8 ರಂದು ಗಣಪತಿ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸಲು ಆರಂಭಿಸಿ, ಕೆಲವೊಂದು ಸಾಕ್ಷ್ಯಗಳನ್ನು ಕಲೆ ಹಾಕಿದ್ದರು, ಆದರೆ ಸರ್ಕಾರ ದಿಢೀರನೇ ಪ್ರಕರಣದ ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚಿಸಿತ್ತು.

ಇದೇ ವೇಳೆ ಮಡಿಕೇರಿ ನ್ಯಾಯಾಲಯ ಮೀವರ ವಿರುದ್ಧವೂ ಎಫ್ ಐ ಆರ್ ದಾಖಲಿಸುವಂತೆ ನಗರ ಪೊಲೀಸರಿಗೆ ಆದೇಶ ನೀಡಿತ್ತು, ಆದರೆ ಇದುವರೆಗೂ ಯಾವುದೇ ತನಿಖೆ, ವಿಚಾರಣೆ ನಡೆಯದೇ ಕೇಸು ಅನಾಥವಾಗಿದೆ.

ಇಬ್ಬರು ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಮತ್ತೊಬ್ಬರು ಸರ್ಕಾರಕ ಪವರ್ ಫುಲ್ ರಾಜಕಾರಣಿ, ಹೀಗಾಗಿ ಈ ಮೂವರಿಗೂ ಸಮನ್ಸ್ ನೀಡುವ ತಾಕತ್ತು ಪೊಲೀಸ್ ಇಲಾಖೆಯಲ್ಲಿ ಯಾರೊಬ್ಬರಿಗೂ ಇಲ್ಲ ಎಂದು ಮಡಿಕೇರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದೆ 8 ದಿನಗಳಿಂದ ಮಡಿಕೇರಿ ಎಸ್ ಪಿ ರಾಜೇಂದ್ರ ಪ್ರಸಾದ್ ರಜೆ ನಿಮಿತ್ತ ತೆರಳಿದ್ದು, ಚಾಮರಾಜನಗರದ ಅಡಿಷನಲ್ ಎಸ್ ಪಿ ಮುತ್ತುರಾಜ್  ಚಾರ್ಜ್ ತೆಗೆದುಕೊಂಡಿದ್ದಾರೆ.

ಎಸ್ ಪಿ ರಾಜೇಂದ್ರ ಪ್ರಸಾದ್ 10 ದಿನಗಳ ರಜೆ ಕೇಳಿದ್ದರು, ಆದರೆ ಕೇವಲ 8 ದಿವಸ ಮಾತ್ರ ರಜೆಗೆ ಅನುಮತಿ ಸಿಕ್ಕಿದೆ. ಈ ಪ್ರಕರಣ ಎಲ್ಲರಿಗೂ ತಲೆ ನೋವಾಗಿದ್ದು, ಯಾರು ಪ್ರಕರಣ ಸಂಬಂಧ ತನಿಖೆ ನಡೆಸಬೇಕು ಎಂದು ಡಿಜಿಪಿ  ಓಂ ಪ್ರಕಾಶ್ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ರಾಜೇಂದ್ರ ಪ್ರಸಾದ್ ಬರಪವವರೆಗೂ ನಾನು ಇಲ್ಲಿಯ ಇನ್ಚಾರ್ಜ್ ಅಫೀಸರ್ ಆಗಿರುತ್ತೇನೆ ಎಂದು ಮುತ್ತುರಾಜ್ ಹೇಳಿದ್ದಾರೆ, ಆದರೆ ಮುತ್ತುರಾಜ್ ಅವರೇ ಪ್ರಕರಣದ ತನಿಖಾಧಿಕಾರಿ ಎಂದು ಪ್ರಸಾದ್ ತಿಳಿಸಿದ್ದಾರೆ.

SCROLL FOR NEXT