ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್ ಪುತ್ರ ಉಮರ್ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಉಮರ್ ಅವರು ಸ್ನೇಹಿತರ ಜತೆ ಪಬ್‌ಗೆ ಬಂದಿದ್ದರು. ಇದೇ ವೇಳೆ ಅವರ ಪಕ್ಕದ ಟೇಬಲ್‌ನಲ್ಲಿ ನಾಲ್ವರು ಯುವಕರ ಗುಂಪು ಕುಳಿತಿತ್ತು. ಅವರಿಗೂ–ಇವರಿಗೂ ಮಾತಿನ ಚಕಮಕಿ ಆರಂಭವಾಯಿತು. ಅಲ್ಲಿ ಯಾವುದೇ ಹಲ್ಲೆ ನಡೆದಿಲ್ಲ, ಜಗಳ ನಡೆಯುವ ವೇಳೆಗಾಗಲೇ ಉಮರ್ ಪಬ್ ನಿಂದ ತೆರಳಿದ್ದರು ಎಂದು ಪಬ್ ಮ್ಯಾನೇಜರ್ ಜ್ಯೋತಿಶ್ ಹೇಳಿದ್ದಾರೆ.
ಜಗಳ ಮಾಡಿದ ಒಂದು ಗುಂಪಿನಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್ ಅವರ ಪುತ್ರ ಉಮರ್ ಕೂಡ ಇದ್ದರು ಎನ್ನಲಾಗಿದೆ. ಆದರೆ, ಈ ಆರೋಪ ನಿರಾಕರಿಸಿರುವ ಹ್ಯಾರೀಸ್, ನನ್ನ ಮಗ ಪಬ್‌ಗೆ ಹೋಗಿದ್ದು ಹಾಗೂ ಅಲ್ಲಿ ಗಲಾಟೆಯಾಗಿದ್ದು ಎಲ್ಲವೂ ನಿಜ. ಆದರೆ, ಆತ ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಜಗಳ ಪ್ರಾರಂಭವಾದಾಗ, ನನ್ನ ಮಗ ಗಲಾಟೆ ಬಿಡಿಸಲು ತೆರಳಿದ್ದ. ಇದನ್ನೇ ತಪ್ಪಾಗಿ ಭಾವಿಸಲಾಗಿದೆ. ಗಲಾಟೆ ನಡೆದ ಸ್ಥಳದಲ್ಲಿ ಶಾಸಕರ ಪುತ್ರನೊಬ್ಬನಿದ್ದ ಎಂಬ ಒಂದೇ ಕಾರಣಕ್ಕೆ, ಆತನ ಹೆಸರನ್ನು ತಳುಕು ಹಾಕಲಾಗಿದೆ. ಒಂದು ವೇಳೆ ಪ್ರಕರಣದಲ್ಲಿ ನನ್ನ ಮಗನ ತಪ್ಪು ಕಂಡು ಬಂದರೆ ಪೊಲೀಸರು ಕ್ರಮ ಜರುಗಿಸಲಿ ಎಂದು ಹ್ಯಾರೀಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈಸಂಬಂಧ ಪ್ರತಿಕ್ರಿಯೆ ನೀಡಿರುವ ಅಶೋಕ ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿಜಯ್ ಹಡಗಲಿ ನಮಗೆ ಈ ಸಂಬಂಧ ಯಾವ ದೂರು ಬಂದಿಲ್ಲ, ಹಲ್ಲೆಗೊಳಗಾದ ಯುವಕನನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಶೋಕನಗರ ಪೊಲೀಸ್ ಠಾಣೆಗೆ ಬಂದ ಯುವಕನೊಬ್ಬ ತನ್ನ ಮೇಲೆ ಶಾಸಕ ಹ್ಯಾರಿಸ್ ಪುತ್ರ ಹಲ್ಲೆ ನಡೆಸಿದ ಎಂದು ದೂರು ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಬ್ ನಲ್ಲಿ ಶಾಸಕ ಹ್ಯಾರಿಸ್ ಪುತ್ರ ಯುವಕನ ಮೇಲೆ ಹಲ್ಲೆ ನಡೆಸಿ ಆತನಿಗೆ ರಕ್ತ ಸ್ರಾವವಾಗುತ್ತಿದ್ದುದ್ದನ್ನು ಅಪರಿಚಿತ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ಕಂಡು ಬಂದಿದೆ.