ಬೆಂಗಳೂರು: ಜೆಎನ್ ಯು ನಲ್ಲಿ ನಡೆದಿದ್ದ ದೇಶ ವಿರೋಧಿ ಘೋಷಣೆ ಮಾದರಿಯ ಘಟನೆ ಬೆಂಗಳೂರಿನಲ್ಲೂ ನಡೆದಿದ್ದು, ಭಾರತೀಯ ಸೇನೆ ವಿರುದ್ಧ ಘೋಷಣೆಯನ್ನು ಕೂಗಲಾಗಿದೆ.
ಬೆಂಗಳೂರಿನ ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನಿಂದ ನಡೆದ ಕಾಶ್ಮೀರ ಸಂಘರ್ಷ ಕುರಿತಾದ ಕಾರ್ಯಾಗಾರದಲ್ಲಿ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಲಾಗಿದ್ದು, ಸೇನೆಯಿಂದ ಆಜಾದಿ ನೀಡುವಂತೆ ಘೋಷಣೆಗಳನ್ನು ಕೂಗಲಾಗಿದೆ.
ಅಷ್ಟೇ ಅಲ್ಲದೆ ಕಾಶ್ಮೀರದಲ್ಲಿ ಇತ್ತೀಚಿಗೆ ಸೇನೆಯ ದಾಳಿಗೆ ಬಲಿಯಾಗಿದ್ದ ಬುರ್ಹಾನ್ ವಾನಿಯನ್ನು ಹುತಾತ್ಮ, ಹೀರೊ ಎಂಬಂತೆ ಬಿಂಬಿಸಿ ಘೋಷಣೆಗಳನ್ನು ಕೂಗಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಕಾಶ್ಮೀರದಿಂದ ಬಂದಿದ್ದ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತೀಯ ಸೇನೆ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿವೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರೊಬ್ಬರು ಭಾರತೀಯ ಸೇನೆಯ ಪರವಾಗಿ ಮಾತನಾಡಿದ್ದಕ್ಕೆ ಕೆಂಡಾಮಂಡಲರಾದ ಯುವಕರ ಗುಂಪೊಂದು ಸಭಿಕರ ಮೇಲೆ ದಾಳಿ ನಡೆಸಲು ಮುಂದಾದ ಘಟನೆಯು ನಡೆದಿದೆ.
ಬಳಿಕ ಜೆಎನ್ ಯು ಮಾದರಿಯಲ್ಲೇ ಜಾನ್ ಸೆ ಲೇಂಗೆ ಆಜಾದಿ, ಇಂಡಿಯನ್ ಆರ್ಮಿ ಸೆ ಹಮ್ ಚಾಹಿಯೇ ಆಜಾದಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸ್ಥಳದಲ್ಲೇ ಇದ್ದ ಎಬಿವಿಪಿ ಕಾರ್ಯಕರ್ತರು ದೇಶ ವಿರೋಧಿ ಘೋಷಣೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿದ್ದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿರುವ ಎಬಿವಿಪಿ ಕಾರ್ಯಕರ್ತೆ ತನ್ಮಯಿ ಪ್ರೇಮ್ ಕುಮಾರ್, ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದು ಅಲ್ಲದೆ ಕಾಶ್ಮೀರ ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮ, ಹೀರೊ ಎಂಬಂತೆ ಬಿಂಬಿಸುವ ನಾಟಕವನ್ನು ಪ್ರದರ್ಶಿಸಿದ್ದಾರೆ. ಈ ಕುರುತು ವಿಡಿಯೋ ಮಾಡಿದ್ದು ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಸಂಜೆ 7 ಗಂಟೆಯಿಂದ ಪ್ರಾರಂಭವಾದ ಕಾರ್ಯಕ್ರಮ ಪೋಲೀಸರ ಬಂದೋಬಸ್ತ್ ನಲ್ಲೆ ನಡೆಯಿತಾದರೂ ಕೊನೆಯಲ್ಲಿ ಈ ಘಟನೆ ನಡೆದಿದೆ. ತಕ್ಷಣವೇ ಪೊಲೀಸರು ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ. ಈ ಹಿಂದೆಯೂ ಸಹ ಬೆಂಗಳೂರಿನಲ್ಲಿ ಕಾಶ್ಮೀರ ಪರವಾದ, ಭಾರತೀಯ ಸೇನೆ ವಿರುದ್ಧವಾದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಇದನ್ನು ಪೊಲೀಸರು ತಡೆಗಟ್ಟಿದ್ದರು.