ರಾಜ್ಯ

ಬೆಂಗಳೂರು: ಮನೆಯಲ್ಲಿ ಸಿಲಿಂಡರ್ ಸ್ಫೋಟ, ಮೂವರಿಗೆ ಗಾಯ

Shilpa D

ಬೆಂಗಳೂರು: ಈಜಿಪುರದಲ್ಲಿನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡಿದ್ದು, ಮಹಿಳೆ ಸ್ಥಿತಿ ಗಂಭೀರವಾಗಿದೆ.

ಈಜಿಪುರ ಸಮೀಪದ ಆರ್‌.ಎ.ರಸ್ತೆಯ 'ಶಾಲಮ್' ಎಂಬ ಎರಡಂತಸ್ತಿನ ಮನೆಯಲ್ಲಿ ಭಾನುವಾರ ಮಧ್ಯಾಹ್ನ ಈ ಸ್ಫೋಟ ಸಂಭವಿಸಿದೆ. ಮನೆಯ ನೆಲ ಅಂತಸ್ತಿನಲ್ಲಿ ಸ್ಫೋಟ ನಡೆದಿದ್ದು, ದಟ್ಟ ಹೊಗೆ ಆವರಿಸಿತ್ತು.

ಈ ಮನೆ ಕೇರಳ ಮೂಲದ ಮ್ಯಾಥ್ಯೂ ಎಂಬುವವರಿಗೆ ಸೇರಿದ್ದಾಗಿದೆ. ಘಟನೆ ನಡೆದ ವೇಳೆ ಮ್ಯಾಥ್ಯೂ ಊರಿನಲ್ಲಿರಲಿಲ್ಲ. ಈ ಕಟ್ಟಡದಲ್ಲಿ ಸುಮಾರು 12 ಕುಟುಂಬಗಳು ವಾಸವಾಗಿವೆ. ಸ್ಫೋಟದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಘಟನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ದಂಪತಿ ಸೋಮ ಬಿಸ್ವಾಸ್ ಹಾಗೂ ಸುಷ್ಮಾ ಎಂಬುವರು ಗಾಯಗೊಂಡಿದ್ದಾರೆ.

ನೆಲ ಮಹಡಿಯಲ್ಲಿ ಘಟನೆ ಸಂಭವಿಸಿದ್ದು, ಮೊದಲ ಮಹಡಿಯಲ್ಲಿ ವಾಸವಾಗಿದ್ದ ಯುವಕೊಬ್ಬ ಗ್ಯಾಸ್ ಲೀಕ್ ಆಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾನೆ, ಆತ ಹೇಳಿದ ಎರಡು ಮೂರು ನಿಮಿಷಗಳಲ್ಲೇ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಿಲಿಂಡರ್ ಸ್ಫೋಟ ಎಂಬುದನ್ನು ಖಚಿತ ಪಡಿಸಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಮೆಘರಿಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರ ವಲಯ ಡಿಸಿಪಿ ಸಂದೀಪ್ ಪಾಟೀಲ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಫೋಟದಿಂದಾಗಿ ಮನೆಯ ಹೊರಗೆ ನಿಲ್ಲಿಸಿದ್ದ ಕಾರು, ಮನೆಯ ಕಿಟಕಿಗಾಜುಗಳು ಜಖಂಗೊಂಡಿವೆ. ಸ್ಫೋಟಕ್ಕೆ ನಿಖರವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

SCROLL FOR NEXT