ರಾಜ್ಯ

ಸೇನೆ ವಿರುದ್ಧ ಘೋಷಣೆ: ರಾಜಭವನಕ್ಕೆ ಮುತ್ತಿಗೆ ಹಾಕಿದ ಎಬಿವಿಪಿ, ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

Srinivasamurthy VN

ಬೆಂಗಳೂರು: ಕಾಶ್ಮೀರ ವಿಚಾರ ಚರ್ಚೆ ವೇಳೆ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ನೆಸ್ಟಿ ಇಂಡಿಯಾ ಮತ್ತು ದಿ ಯುನೈಟೆಡ್ ಥಿಯಾಲಜಿಕಲ್  ಕಾಲೇಜ್ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಮಂಗಳವಾರ ನೂರಾರು ಕಾರ್ಯಕರ್ತರು  ರಾಜಭವನಕ್ಕೆ ಮುತ್ತಿಗೆ ಹಾಕಿದ್ದಾರೆ.

ಇಂದು ಬೆಳಗ್ಗೆ ಸುಮಾರು 11.30ರ ಸುಮಾರಿನಲ್ಲಿ ರಾಜಭವನದತ್ತ ನುಗ್ಗಿದ ಸುಮಾರು 300ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರು ನುಗ್ಗಿದ್ದು, ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ.  ಬೆಂಗಳೂರಿನ ಆರ್ ಸಿ ಕಾಲೇಜಿನ ಆವರಣದಿಂದ ಆರಂಭವಾದ ಎಬಿವಿಪಿ ಕಾರ್ಯಕರ್ತರ ಪ್ರತಿಭಟನಾ ರ್ಯಾಲಿ ರಾಜಭವನ ತಲುಪುತ್ತಿದ್ದಂತೆಯೇ ತೀವ್ರವಾಗಿತ್ತು. ಕೆಲ ಕಾರ್ಯಕರ್ತರು  ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಂತೆಯೇ ಪೊಲೀಸರು ಅವರನ್ನು ತಡೆದರು. ಈ ವೇಳೆ ಕೆಲ ಕಾರ್ಯಕರ್ತರು ಸಮೀಪದಲ್ಲಿಯೇ ಇದ್ದ ಪೊಲೀಸ್ ಆಯುಕ್ತರ ಕಚೇರಿಯತ್ತ ನುಗ್ಗಿದ್ದು  ಅವರನ್ನು ಕೂಡ ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾ ನಿರತರು ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ.

ಈ ಹಿನ್ನಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರ ಲಘು ಲಾಠಿ ಪ್ರಹಾರ ನಡೆಸಿದ್ದು, ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದಾಗಿ ಇಂದು ಬೆಳಗ್ಗೆ  11.30ರಿಂದ ರಾಜಭವನದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಈ ಮಾರ್ಗದಲ್ಲಿ ಚಲಿಸುವ ವಾಹನ ಸವಾರರು ಹರಸಾಹಸಪಡುವಂತಾಗಿದೆ.

ತಪ್ಪಿತಸ್ಥರ ಬಂಧಿಸುವಂತೆ ಆಗ್ರಹ
ಇದೇ ವೇಳೆ ದೇಶ ವಿರೋಧ ಘೋಷಣೆ ಮತ್ತು ಸೇನೆಯ ವಿರುದ್ಧ ಘೋಷಣೆ ಕೂಗಿದ ಅಮ್ನೆಸ್ಟಿ ಇಂಡಿಯಾ ಸಂಸ್ಛೆ ಹಾಗೂ ದಿ ಯುನೈಟೆಡ್ ಥಿಯಾಲಜಿಕಲ್ ಕಾಲೇಜು ವಿರುದ್ಧ ಕಠಿಣಕ್ರಮ  ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ರಾಜ್ಯಪಾಲರು ಮಧ್ಯ ಪ್ರವೇಶಿಸಿ ತಪ್ಪಿತಸ್ಥರ ಬಂಧನವಾಗುವಂತೆ ನೋಡಿಕೊಳ್ಳಬೇಕು ಎಂದು  ಪ್ರತಿಭಟನಾ ನಿರತರು ಮನವಿ ಮಾಡಿದ್ದಾರೆ. ಇದೇ ವೇಳೆ ಗೃಹಸಚಿವ ಜಿ ಪರಮೇಶ್ವರ ಅವರು ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚನೆ  ನೀಡುವಂತೆಯೂ ಹಾಗೂ ತಪ್ಪಿತಸ್ಥ ಕಾಲೇಜುಗಳನ್ನು ಕೂಡಲೇ ಅಮಾನತ್ತಿನಲ್ಲಿಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸುತ್ತಿದ್ದಾರೆ.

SCROLL FOR NEXT