ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೂ ರಾಜಕಾಲುವೆ ಒತ್ತುವರಿ ತೆರವಿನ ಬಿಸಿ ಮುಟ್ಟುವ ಸಾಧ್ಯತೆ ಇದೆ.
ರಾಜರಾಜೇಶ್ವರಿನಗರದಲ್ಲಿ ಐಡಿಯಲ್ ಹೋಮ್ ಟೌನ್ ಶಿಪ್ ರಾಜಕಾಲುವೆ ಒತ್ತುವರಿ ಮಾಡಿ ಅಕ್ರಮವಾಗಿ ಲೇಔಟ್ ನಿರ್ಮಿಸಿದ್ದು, ಅದರಲ್ಲಿ ನಿವೇಶನ ಖರೀದಿಸಿದ್ದ ನಟ ದರ್ಶನ್ ಈಗ ಅಲ್ಲಿ ಮನೆಯನ್ನೂ ನಿರ್ಮಿಸಿದ್ದಾರೆ. ಹೀಗಾಗಿ ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ಅವರ ಮನೆಯನ್ನು ಸಹ ಬಿಬಿಬಿಎಂಪಿ ತೆರವು ಮಾಡುವ ಸಾಧ್ಯದೆ ಇದೆ ಎನ್ನಲಾಗುತ್ತಿದೆ.
ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಎಸ್ ಎಸ್ ಆಸ್ಪತ್ರೆಯೂ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸರುವ ಬಿಬಿಎಂಪಿ ಜಂಟಿ ಆಯುಕ್ತ ಡಾ.ವೀರಭದ್ರಪ್ಪ ಅವರು, ಬಿಬಿಎಂಪಿ, ಕಂದಾಯ ಹಾಗೂ ಸರ್ವೇ ಅಧಿಕಾರಿಗಳು ದರ್ಶನ್ ಅವರ ಮನೆ ಇರುವ ಪ್ರದೇಶದಲ್ಲಿ ಸರ್ವೇ ನಡೆಸಲಿದ್ದಾರೆ. ಒಂದು ವೇಳೆ ದರ್ಶನ್ ಅವರ ಮನೆ ಒತ್ತುವರಿ ಜಾಗದಲ್ಲಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಈಗಾಗಲೇ ಮನೆ, ಮಠ ಕಳೆದುಕೊಂಡಿದ್ದಾರೆ. ಇದೀಗ ನಟರು, ರಾಜಕಾರಣಿಗಳು, ಮಾಜಿ ಸಚಿವರಿಗೂ ಒತ್ತುವರಿ ತೆರವು ಬಿಸಿ ಮುಟ್ಟಿದೆ.