ರಾಜ್ಯ

ಸೇನೆ ವಿರೋಧಿ ಘೋಷಣೆ; ಅಮ್ನೆಸ್ಟಿ ಕಚೇರಿಗೆ ಎಬಿವಿಪಿ ಮುತ್ತಿಗೆ, ಪೊಲೀಸರಿಂದ ಲಾಠಿ ಪ್ರಹಾರ

Srinivasamurthy VN

ಬೆಂಗಳೂರು: ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಬೆಂಗಳೂರಿನ  ಇಂದಿರಾನಗರದಲ್ಲಿರುವ ಸಂಸ್ಥೆಯ ಕಚೇರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ನಡೆದ ಲಾಠಿ ಚಾರ್ಜ್ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕಾರ್ಯಾಗಾರದಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ವಿದ್ಯಾರ್ಥಿಗಳು ನಡೆಸುತ್ತಿರುವ  ಪ್ರತಿಭಟನೆ ಇಂದು ಹಿಂಸಾಚಾರಕ್ಕೆ ತಿರುಗಿದ್ದು, ಇಂದಿರಾನಗರದಲ್ಲಿರುವ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಕಚೇರಿ ಬಳಿ ಸೇರಿದ್ದ ನೂರಾರು ಎಬಿವಿಪಿ ಕಾರ್ಯಕರ್ತರು  ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಘಟನೆ ಹಿಂಸಾಚಾರಕ್ಕೆ  ತಿರುಗಿದೆ.

ಈ ವೇಳೆ ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೆಲ ವಿದ್ಯಾರ್ಥಿಗಳ ತಲೆಗೆ ಏಟು ಬಿದ್ದು ರಕ್ತ ಹರಿದಿದ್ದು,  ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪೊಲೀಸ್ ಲಾಠಿ ಪ್ರಹಾರವನ್ನು ಖಂಡಿಸಿರುವ ಕಾರ್ಯಕರ್ತರು ಪೊಲೀಸರು ಹಾಗೂ ರಾಜ್ಯ ಸರ್ಕಾರದ  ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಲ್ಲದೆ ದೇಶದ್ರೋಹ ಆರೋಪ ಎದುರಿಸುತ್ತಿರುವ ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಮತ್ತಾವುದೇ ಕಾರ್ಯಕ್ರಮಗಳನ್ನು ನಿರ್ವಹಿಸದಂತೆ ಅದನ್ನೂ ಕೂಡಲೇ  ಸ್ಥಗಿತಗೊಳಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

SCROLL FOR NEXT