ಬೆಂಗಳೂರು: ಐದು ಜನರ ತಂಡವೊಂದು 26 ವರ್ಷದ ಮಣಿಪುರಿ ಕ್ರೈಸ್ತ ಧರ್ಮ ಬೋಧಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಣಿಪುರ ಮೂಲದ ಇವಾನ್ ಮಾಮಂಗ್ ಕೆಗ್ ಪೆನ್ ಹಲ್ಲೆಗೊಳಗಾದ ವ್ಯಕ್ತಿ. ಲಕ್ಷ್ಮಿಪುರಂ ನ ತಾಡೋ ಕ್ರಿಶ್ಚಿಯನ್ ಫೆಲೋಶಿಫ್ ಚರ್ಚ್ ನಲ್ಲಿ ಕಳೆದ ಎರಡು ತಿಂಗಳಿಂದ ಧರ್ಮ ಬೋಧಕರಾಗಿ ಕೆಲಸ ಮಾಡುತ್ತಿದ್ದರು.
ಮಧ್ಯರಾತ್ರಿ 2.30 ಸಮಯದಲ್ಲಿ ಸ್ನೇಹಿತನ ಮನೆಯಿಂದ ವಾಪಸ್ ಬರುತ್ತಿರುವಾಗ ನನ್ನ ಮನೆಯ ಮುಂದಿನ ಜಂಕ್ಷನ್ ಬಳಿ ಕೆಲವು ಮಂದಿ ನಿಂತಿದ್ದರು. ಅವರನ್ನು ದಾಟಿ ನಾನು ಮುಂದೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದು, ಯಾವುದೇ ಕಾರಣವಿಲ್ಲದೇ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ದೂರು ದಾಖಲಿಸಿದ್ದಾರೆ.
ಹಲ್ಲೆ ನಡೆಸುತ್ತಿದ್ದವರು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಿದ್ದುದು ನನಗೆ ಅರ್ಥವಾಗಲಿಲ್ಲ,. ಅವರು ನನ್ನ ಬಳಿಯಿಂದ ಏನೂ ದೋಚಲಿಲ್ಲ, ಆದರೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾನು ಜೋರಾಗಿ ಕೂಗಿಕೊಂಡೆ. ಅಕ್ಕಪಕ್ಕದ ಮನೆಯವರು ಎದ್ದು ಹೊರ ಬಂದಾಗ ಅವರು ನನ್ನಬಿಟ್ಟು ಓಡಿ ಹೋದರು ಎಂದು ಆರೋಪಿಸಿದ್ದಾರೆ.
ಇಂದಿರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ.