ರಾಜ್ಯ

ಆಮ್ನೆಸ್ಟಿ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ: ಡಿಜಿ, ಐಜಿಪಿ

Manjula VN

ಹುಬ್ಬಳ್ಳಿ: ದೇಶ ವಿರೋಧಿ ಘೋಷಣೆ ಕೂಗಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿರುವ ಆಮ್ನೆಸ್ಟಿ ಇಂಟರನ್ಯಾಷನಲ್ ಇಂಡಿಯಾದ ವಿರುದ್ಧ ಬಂದಿರುವ ಸರಣಿ ದೂರುಗಳನ್ನು ಸ್ವೀಕರಸಲಾಗಿದ್ದು, ಕಾರ್ಯಕ್ರಮದ ವಿಡಿಯೋವನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಗುರುವಾರ ಹೇಳಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ಸ್ಪಷ್ಟನೆ ಸಿಗುತ್ತಿಲ್ಲ. ಎಫ್ಐಆರ್ ನಲ್ಲಿ ಯಾರ ಹೆಸರನ್ನು ಹೆಸರಿಸಲಾಗಿಲ್ಲ. ಹೀಗಿರುವಾಗ ಯಾರ ವಿರುದ್ಧ ನಾವು ಕ್ರಮ ಕೈಗೊಳ್ಳಲು ಸಾಧ್ಯ? ಪೊಲೀಸರು ಪ್ರಸ್ತುತ ಕಾರ್ಯಕ್ರಮದ ವಿಡಿಯೋವನ್ನು ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ಗೃಹ ಸಚಿವ ಜಿ ಪರಮೇಶ್ವರ್ ಅವರು ನಡೆಸುತ್ತಿರುವ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ಕೇಳಿಬಂದ ಪಾಕಿಸ್ತಾನದ ಪರ ಘೋಷಣೆ ಕುರಿತಂತೆ ಮಾತನಾಡಿದ ಅವರು, ಇದು ಅಂತಹ ದೊಡ್ಡ ಗಂಭೀರವಾದ ಪ್ರಕರಣವೇನಲ್ಲ ಎಂದು ಹೇಳಿದ್ದಾರೆ.

ಘೋಷಣೆ ಕೂಗಿದ ವಿದ್ಯಾರ್ಥಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೈಮರೆತ ಸ್ಥಿತಿಯಲ್ಲಿದ್ದ. ಇಂತಹ ಘಟನೆಗಳನ್ನು ದೊಡ್ಡ ವಿಚಾರ ಮಾಡಬಾರದು. ಈ ಪ್ರಕರಣವನ್ನು ಪೊಲೀಸರ ತನಿಖೆ ನಡೆಸುತ್ತಿದ್ದಾರೆ. ಇದೇನು ಅಂತಹ ದೊಡ್ಡ ಗಂಭೀರ ವಿಚಾರವೇನಲ್ಲ. ಆದರೆ, ಕಾನೂನು ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಡಿವೈಎಸ್ಪಿ ಅನುಪಮಾ ಶೆಣೈ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಕುರಿತಂತೆ ಮಾತನಾಡಿದ ಅವರು, ಅನುಪಮಾ ಯಾವ ಕಾರಣಕ್ಕೆ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆಂಬುದು ನನಗೆ ಅರ್ಥವಾಗುತ್ತಿಲ್ಲ. ಪ್ರಸ್ತುತ ಅವರು ನಮ್ಮ ಇಲಾಖೆಗೆ ಸೇರಿದವರಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಮಾತನಾಡಲು ನಾನು ಇಚ್ಛಿಸುವುದಿಲ್ಲ ಎಂದು ತಿಳಿಸಿದರು.

ಮಹದಾಯಿ ತೀರ್ಪು ಹಿನ್ನೆಲೆಯಲ್ಲಿ ಯಮನೂರಿನಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಕರಣ ಸಂಬಂಧ ಈಗಾಗಲೇ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತನಿಖೆ ವರದಿ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ಕೇಳಿಬಂದಿದ್ದೇ ಆದರೆ, ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಅಲ್ಲದೆ, ಮುಗ್ಧ ಜನರಿಗೆ ಯಾವುದೇ ಕಾರಣಕ್ಕೂ ಶಿಕ್ಷೆಯಾಗುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿದರು.

SCROLL FOR NEXT