ಬೆಂಗಳೂರು: ಸರ್ಕಾರಿ ಭೂಮಿ ಕಬಳಿಸಿದ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ವಿರುದ್ಧ ಬುಧವಾರ ಮತ್ತೊಂದು ದೂರು ದಾಖಲಾಗಿದೆ.
ಆರ್ ಟಿಐ ಕಾರ್ಯಕರ್ತ ರಮೇಶ್ ಎಂಬುವವರು ಅರವಿಂದ್ ಜಾಧವ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಹಾಗೂ ಆನೇಕಲ್ ತಾಲೂಕ ತಹಶೀಲ್ದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಂದಾಯ ಭೂಮಿ ಕಬಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ನಿನ್ನೆ ಜಾಧವ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ತಾಯಿ ತಾರಾಭಾಯ್ ಹೆಸರಲ್ಲಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ಆರ್ ಟಿ ಐ ಕಾರ್ಯಕರ್ತ ಎಸ್.ಭಾಸ್ಕರನ್ ಅವರು ಮುಖ್ಯ ಕಾರ್ಯದರ್ಶಿ ವಿರುದ್ಧ ಎಸಿಬಿಗೆ ನೀಡಿದ್ದರು.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯ ಸರ್ವೇ ಸಂಖ್ಯೆ 29ರಲ್ಲಿ 74 ಎಕರೆ ಸರ್ಕಾರಿ ಜಮೀನಿದೆ. ಈ ಪೈಕಿ 8.30 ಎಕರೆ ತಮ್ಮ ತಾಯಿಗೆ ಮಂಜೂರಾಗಿದ್ದು, ಇದಕ್ಕೆ ದಾಖಲೆ ನೀಡುವಂತೆ ಜಿಲ್ಲಾಧಿಕಾರಿಗೆ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಸೂಚಿಸಿದರು. ಈ 8.30 ಎಕರೆ ಸೇರಿ ಒಟ್ಟು 66 ಎಕರೆ ಜಮೀನನ್ನು ವಿವಿಧ "ಫಲಾನುಭವಿ'ಗಳಿಗೆ ನೀಡಲು ಅಕ್ರಮವಾಗಿ ದಾಖಲೆ ಸೃಷ್ಟಿಗೆ ಹಲವು ಹಂತಗಳಲ್ಲಿ ಸಿದ್ಧತೆ ನಡೆಯುತ್ತಿದ್ದಂತೆ, ಸರ್ವೇ ಇಲಾಖೆ ಅಧಿಕಾರಿಯಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಮುಖ್ಯ ಕಾರ್ಯದರ್ಶಿ, ಅಧಿಕಾರಿಯನ್ನು ವರ್ಗಾಯಿಸಿದ್ದಾರೆ ಎನ್ನಲಾಗಿದೆ.