ಬೆಂಗಳೂರು: ಶಾಲೆಗೆ ತೆರಳಿದ್ದ 13 ವರ್ಷದ ಬಾಲಕಿಯೊಬ್ಬಳು ಶನಿವಾರ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಶನಿವಾರ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಎಂ.ಕೆ. ಪೂಜಿತಾ ಇಂದು ಬೆಳಗ್ಗೆ ಯತಾಪ್ರಕಾರ ಶಾಲೆಗೆ ತೆರಳಿದ್ದಾಳೆ. ಆದರೆ ಸಂಜೆಯಾದರೂ ಮನೆಗೆ ವಾಪಸ್ ಬಂದಿಲ್ಲ. ಇದು ಪೋಷಕರನ್ನು ಚಿಂತೆಗೀಡು ಮಾಡಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೋಡಲು ಲಕ್ಷಣವಾಗಿದ್ದ ಹಾಗೂ ಆಟಪಾಠದಲ್ಲಿ ಮುಂದಿದ್ದ ಪೂಜಿತಾ ಇಂದು ಇದ್ದಕ್ಕಿದ್ದಂತೆ ಶಾಲೆಯ ಸಮವಸ್ತ್ರದಲ್ಲಿಯೇ ನಾಪತ್ತೆಯಾಗಿದ್ದಾಳೆ.
ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಓದಲು ಮತ್ತು ಮಾತಾಡಲು ಬಲ್ಲವಳಾಗಿರುವ ಪೂಜಿತಾ ಬೀಳಿ ಬಣ್ಣದ, ಕಂದು ಪಟ್ಟಿಗಳಿರುವ ಅಂಗಿ ಮತ್ತು ಕಂದು ಬಣ್ಣದ ಸ್ಕರ್ಟ್ ತೊಟ್ಟಿದ್ದು, ಕಪ್ಪು ಬಣ್ಣದ ಟಾಪ್ ಹಾಗು ಪ್ಯಾಂಟನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ಕೆಂಪು ಬಣ್ಣದ ಸ್ಕೂಲ್ ಬ್ಯಾಗನ್ನು ಕೂಡ ತೆಗೆದುಕೊಂಡು ಹೋಗಿದ್ದಾಳೆ.
ಶಾಲೆಯಲ್ಲಿ ಓದುಬರಹದಲ್ಲಿ ಮುಂದಿದ್ದ ಮಗಳು ಇದ್ದಕ್ಕೆ ನಾಪತ್ತೆಯಾಗಿದ್ದು ಪಾಲಕರನ್ನು ಚಿಂತೆಗೀಡು ಮಾಡಿದೆ. ಆಕೆ ಮನೆಗೆ ಬರುತ್ತಿದ್ದಂತೆ ಶಾಲೆಯಲ್ಲಿ ಅಂದು ನಡೆದ ಎಲ್ಲ ಘಟನೆಗಳನ್ನು ವಿವರಿಸುತ್ತಿದ್ದಳು ಮತ್ತು ಶಾಲೆಗೆ ಹೋಗುವುದನ್ನು ತುಂಬಾ ಇಷ್ಟಪಡುತ್ತಿದ್ದಳು ಎಂದು ಆಕೆಯ ತಾಯಿ ಪದ್ಮಿನಿ ತಿಳಿಸಿದ್ದಾರೆ.