ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಲೋಕಾಯುಕ್ತ ಐಜಿಪಿಯಾಗಿದ್ದ ಪ್ರಣಬ್ ಮೊಹಂತಿ ಅವರನ್ನು ಶನಿವಾರ ಸಿಐಡಿ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ಇರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ಇಂದು ಪ್ರಣಬ್ ಮೊಹಂತಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಎಡಿಜಿಪಿ ಸಿ.ಎಚ್. ಪ್ರತಾಪ್ ರೆಡ್ಡಿ ನೇತೃತ್ವದ ತಂಡ ಪ್ರಣಬ್ ಮೊಹಂತಿ ಅವರನ್ನು ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಯಾವಾಗಿನಿಂದ ಗಣಪತಿಯವರ ಪರಿಚಯವಿದೆ? ಲೋಕಾಯುಕ್ತದಲ್ಲಿನ ಕೇಸ್ ಗೆ ಸಂಬಂಧಿಸಿದಂತೆ ಅವರನ್ನು ಎಷ್ಟು ಬಾರಿ ವಿಚಾರಣೆ ನಡೆಸಿದ್ದೀರಿ? ಎಂಬ ಪ್ರಶ್ನೆಗಳು ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ.
ಸಿಐಡಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿರುವ ಪ್ರಣಬ್ ಮೊಹಂತಿ ಅವರು, ಎಂ.ಕೆ.ಗಣಪತಿ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಗಣಪತಿ ಅವರು ನನ್ನ ಕೈಕೆಳಗೆ ಯಾವತ್ತೂ ಕೆಲಸ ಮಾಡಿಲ್ಲ ಮತ್ತು ಅವರ ಅಮಾನತಿಗೂ ನನಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಮಂಗಳೂರು ಡಿವೈಎಸ್ಪಿ ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಖಾಸಗಿ ವಾಹನಿಯೊಂದಕ್ಕೆ ಸಂದರ್ಶನವೊಂದನ್ನು ನೀಡಿದ್ದರು. ಸಂದರ್ಶನದಲ್ಲಿ ನನಗೇನಾದರೂ ಆದರೆ ಕೆ.ಜೆ.ಜಾರ್ಜ್, ಎಡಿಜಿಪಿ ಎ.ಎಂ. ಪ್ರಸಾದ್ ಮತ್ತು ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿಯವರೇ ನೇರಹೊಣೆಯಾಗಿರುತ್ತಾರೆಂದು ಹೇಳಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ಸಾಕಷ್ಟು ವಿವಾದ ಹಾಗೂ ಚರ್ಚೆಯನ್ನು ಹುಟ್ಟುಹಾಕಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.