ರಾಜ್ಯ

ಮಂಗಳೂರು ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್‌ ಕ್ಯಾಮೆರಾ ಪತ್ತೆ

Lingaraj Badiger
ಮಂಗಳೂರು: ಮಂಗಳೂರಿನ ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್‌ ಕ್ಯಾಮೆರಾ ಆನ್ ಮಾಡಿ ಚಿತ್ರೀಕರಿಸಿರುವ ಆಘಾತಕಾರಿ ಮತ್ತು ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. 
ವಿಕೃತ ಕಾಮುಕರು ಶೌಚಾಲಯದಲ್ಲಿ ರಹಸ್ಯವಾಗಿಟ್ಟಿದ್ದ ಮೊಬೈಲನ್ನು ಅಗಸ್ಟ್‌ 24 ರಂದು ವಿದ್ಯಾರ್ಥಿನಿಯೊಬ್ಬಳು ಪತ್ತೆ ಹಚ್ಚಿ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದು, ಈ ಬಗ್ಗೆ ವಿವಿ ಆಂತರಿಕ ತನಿಖೆಗೆ ಆದೇಶಿಸಿತ್ತು. 
ಇಂಟೆಕ್ಸ್‌ ಕಂಪೆನಿಗೆ ಸೇರಿರುವ ಮೊಬೈಲ್‌ ಇದಾಗಿದ್ದು, ಟಾಯ್ಲೆಟ್‌ನ ಮೇಲ್ಭಾಗದಲ್ಲಿ  ಒಂದು ಹಲಗೆ ಇಟ್ಟು ಅದಕ್ಕೆ ಮೊಬೈಲ್  ಕ್ಯಾಮರಕ್ಕೆ ಬೇಕಾಗುವಷ್ಟು  ರಂಧ್ರ ಮಾಡಿ  ಪೇಪರ್ ಸುತ್ತಲಾಗಿತ್ತು. ಮೊಬೈಲ್‌ನಲ್ಲಿ ಸಿಮ್‌ ಇದ್ದಿರಲಿಲ್ಲ. ಮೊಬೈಲ್‌ ರೆಕಾರ್ಡಿಂಗ್‌ ಮೋಡ್‌ನ‌ಲ್ಲಿರಿಸಿದ ಕಾಮುಕರು ಬ್ಯಾಟರಿ ಪವರ್‌ ಬ್ಯಾಂಕ್‌ ಸಹ ಒದಗಿಸಿದ್ದರು. 
ಈ ಮೊಬೈಲ್‌ನಿಂದ ಅಗಸ್ಟ್‌ 7 ಮತ್ತು 11 ನೇ ತಾರೀಕಿನಂದು ವಿಡಿಯೋ ಕ್ಲಿಪ್‌ಗಳು  ಸೆಂಡ್‌ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾಮಾಂಧರು ಗೇಟ್‌ ಹಾರಿ ಬಂದು ಮೊಬೈಲ್‌ ಇರಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 
ಈ ಬಗ್ಗೆ ವಿವಿ ಆಂತರಿಕ ತನಿಖೆ ನಡೆಸಿದ್ದು ಗಂಭೀರ ಪ್ರಕರಣವನ್ನು ಸೈಬರ್‌ ಕ್ರೈಮ್‌ ವಿಭಾಗಕ್ಕೆ ಹಸ್ತಾಂತರಿಸುವ ಕುರಿತು  ತೀರ್ಮಾನ ಕೈಗೊಳ್ಳಲಾಗಿದೆ.ಇದುವರೆಗೆ ಪೊಲೀಸ್‌ ಪ್ರಕರಣ ದಾಖಲಾಗಿಲ್ಲ. 
SCROLL FOR NEXT