ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣ ಸಂಬಂಧ ದಿನಕಳೆದಂತೆ ಸ್ಪೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಸರ್ಕಾರಿ ಅಧಿಕಾರಿಗಳಾದ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ಮನೆಯಲ್ಲಿ ಲಭ್ಯವಾದ ಕೋಟಿ ಕೋಟಿ ಹೊಸ ನೋಟುಗಳ ಬಂಡವಾಳ ಬಯಲಾಗಿದೆ.
ಇತ್ತ ನೋಟು ನಿಷೇಧದ ಬಳಿಕ ಇಡೀ ದೇಶದ ಜನರು ನೋಟಿಗಾಗಿ ಬ್ಯಾಂಕುಗಳ ಮುಂದೆ ಸರತಿ ಸಾಲಲ್ಲಿ ನಿಂತಿದ್ದರೆ, ಅತ್ತ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಕಾಳಧನಿಕರು ಯಾವುದೇ ರೀತಿಯ ಕಷ್ಟವಿಲ್ಲದೇ ತಮ್ಮ ಬಳಿ ಇರುವ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಕೂಡ ಕುಮ್ಮಕ್ಕು ನೀಡುತ್ತಿದ್ದು, ಇದೇ ರೀತಿಯ ವಾಮಮಾರ್ಗದಲ್ಲಿ ಐಟಿ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕಿಬಿದ್ದ ರಾಜ್ಯದ ಇಬ್ಬರು ಅಧಿಕಾರಿಗಳಾದ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರು ತಮ್ಮ ಬಳಿ ಇದ್ದ ಅಪಾರ ಕಪ್ಪುಹಣವನ್ನು ಹೊಸ ನೋಟುಗಳಾಗಿ ಬದಲಾಯಿಸಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ದಿನಕ್ಕೆ 2 ಸಾವಿರ ಮಾತ್ರ ಪಡೆಯಬಹುದಾದ ಈ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ 4.7 ಕೋಟಿಯಷ್ಟು 2000 ರು. ನೋಟು ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಖಾಸಗಿ ಸುದ್ದಿ ವಾಹಿನಿಯೊಂದು ಈ ಬಗ್ಗೆ ವರದಿ ಮಾಡಿದ್ದು, ಬ್ಯಾಂಕ್ ಅಧಿಕಾರಿಗಳಿಗೆ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರು ಭಾರಿ ಪ್ರಮಾಣದ ಕಮಿಷನ್ ನೀಡುವ ಮೂಲಕ ತಮ್ಮ ಬಳಿ ಇದ್ದ ಅಪಾರ ಪ್ರಮಾಣದ ನಿಷೇದಿತ ನೋಟುಗಳನ್ನು ನೀಡಿ ಹೊಸ 2000 ಮುಖಬೆಲೆಯ ನೋಟುಗಳನ್ನು ಪಡೆದಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೇ ದುಬಾರಿ ಕಮಿಷನ್ ನೀಡುವ ನಿಷೇಧಿತ ಹಣದಿಂದಲೇ ದುಬಾರಿ ಕಾರು ಖರೀದಿ ಕೂಡ ಮಾಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಚಿಕ್ಕರಾಯಪ್ಪ, ಜಯಚಂದ್ರ ಪರ ಗುತ್ತಿಗೆದಾರರು ಕಮಿಷನ್ ದಂಧೆ ನಡೆಸಿರುವುದು ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಹಿರಂಗವಾಗಿದ್ದು, ಈ ಇಬ್ಬರೂ ಅಧಿಕಾರಿಗಳ ಪರ ಗುತ್ತಿಗೆದಾರರಾದ ಚಂದ್ರಕಾಂತ್, ಚಕ್ರವರ್ತಿ, ನಜೀರ್ ಎಂಬುವರು ಮಧ್ಯಸ್ಥಿಕೆ ವಹಿಸಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಹಣ ವರ್ಗಾವಣೆಗೆ ತಮಿಳುನಾಡಿನ 4 ಬ್ಯಾಂಕ್ ಗಳ ಅಧಿಕಾರಿಗಳು ಸಹಕರಿಸಿದ್ದು, ಈರೋಡ್, ಸೇಲಂ, ಮಧುರೈನ 4 ಬ್ಯಾಂಕ್ ಗಳಿಂದ ಹಣ ಬದಲಾವಣೆ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳು ಒಟ್ಟು 16 ಕೋಟಿ ಕಪ್ಪು ಹಣಕ್ಕೆ ಗುತ್ತಿಗೆದಾರರು ಹೊಸ ನೋಟು ಪಡೆದಿದ್ದು, ಇದಕ್ಕೆ ಪ್ರತಿಯಾಗಿ ಬ್ಯಾಂಕ್ ಅಧಿಕಾರಿಗಳಿಗೆ ಕಮಿಷನ್ ಹಣ ನೀಡಿದ್ದಾರೆ ಎಂಬ ಮಾಹಿತಿಯನ್ನು ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆ ವೇಳೆ ಬಯಲಾಗಿದೆ.
ಇನ್ನು ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಈ ಅಕ್ರಮ ವ್ಯವಹಾರದ ಮೇಲೆ ಕೆಂಗಣ್ಣು ಬೀರಿರುವ ಭ್ರಷ್ಟಾಚಾರ ನಿಗ್ರಹ ದಳ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಬ್ಯಾಂಕ್ ವಹಿವಾಟಿನ ವಿವರ ನೀಡುವಂತೆ ಬ್ಯಾಂಕ್`ಗಳಿಗೆ ನೋಟಿಸ್ ನೀಡಿವೆ ಎಂದು ತಿಳಿದುಬಂದಿದೆ.