ಬೆಂಗಳೂರು: ಕರ್ನಾಟಕದಲ್ಲಿ ಹುಟ್ಟಿದ್ದರು ಜಯಲಲಿತಾ ತಮಿಳುನಾಡು ಅಮ್ಮನಾಗಿದ್ದರು. ಹಾಗಂತ ಅವರು ಕರ್ನಾಟಕದ ಜೊತೆಗಿನ ಸಂಬಂಧವನ್ನೇನು ಕಡಿದುಕೊಂಡಿರಲಿಲ್ಲ. ತಮ್ಮ ಎಐಎಡಿಎಂಕೆ ಪಕ್ಷವನ್ನು ಕರ್ನಾಟಕದಲ್ಲಿ ವಿಸ್ತರಿಸಬೇಕೆಂಬ ಮಹಾದಾಸೆ ಕಂಡಿದ್ದರು.
1994 ರಲ್ಲಿ ಬೆಂಗಳೂರಿನ ಗಾಂಧಿ ನಗರದಲ್ಲಿ ಎಐಎಡಿಎಂಕೆ ಯಿಂದ ಬಿ. ಮುನಿಯಪ್ಪ ವಿಜಯ ಸಾಧಿಸಿದ ನಂತರ ಕರ್ನಾಟಕದಲ್ಲಿ ತಮ್ಮ ಪಕ್ಷವನ್ನು ಬೆಳೆಸುವ ಆಸೆಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಯಿತು.
ತಮಿಳು ಸಮುದಾಯದವರೇ ಹೆಚ್ಚಿರುವ ಬೆಂಗಳೂರಿನ ಹಲವೆಡೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು, ಬಸವನಗುಡಿ ಹೊರತು ಪಡಿಸಿ ಎಲ್ಲಾ ವಿಧಾನ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲವು ಸಾಧಿಸಬೇಕೆಂಬುದು ಜಯಾ ಆಸೆಯಾಗಿತ್ತು ಎಂದು ಗಾಂಧಿನಗರದ ಎಐಎಡಿಎಂಕೆ ಮಾಜಿ ಶಾಸಕ ಬಿ. ಮುನಿಯಪ್ಪ ಹೇಳಿದ್ದಾರೆ.
ಕೋಲಾರ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಯಸಿದ್ದರು. ಅವಕಾಶವಿರುವ ಕಡೆ ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು.
1999 ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆ, ಭಾರತೀ ನಗರ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸುತ್ತೆಂದು ಜಯಲಲಿತಾ ನಂಬಿದ್ದರು. ಆದರೆ 1996 ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಸೋತ ನಂತರ ಜಯಲಲಿತಾಗೆ ಭಾರಿ ಹಿನ್ನಡೆಯಾಯಿತು.
ಜೊತೆಗೆ ಎಐಎಡಿಎಂಕೆ ಎರಡು ಭಾಗವಾಗಿ ಒಡೆಯಿತು. ತಿರುವನಕ್ಕರಸು ಎಂಜಿಆರ್ ಎಐಎಡಿಎಂಕೆ ಮತ್ತು ಎಐಎಡಿಎಂಕೆ ಎಂದು ಭಾಗವಾಯಿತು. ತಮಿಳುನಾಡಿನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜಯಲಲಿತಾ ಗೆ ಹೋರಾಟ ಅನಿವಾರ್ಯವಾಯಿತು. ಹೀಗಾಗಿ ಕರ್ನಾಟಕದಲ್ಲಿ ಪಕ್ಷ ಕಟ್ಟುವ ಉತ್ಸಾಹಕ್ಕೆ ತಣ್ಣೀರೆರಚಿದಂತಾಯಿತು ಎಂದು ಮುನಿಯಪ್ಪ ತಿಳಿಸಿದ್ದಾರೆ.
ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಲಲಿತಾ ಅವರ ಕನಸನ್ನು ನನಸು ಮಾಡುತ್ತೇವೆ. ಬೆಂಗಳೂರಿನ ರಾಜಾಜಿನಗರ, ಕೆಜಿಎಫ್, ನರಸಿಂಹರಾಜ ಕ್ಷೇತ್ರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೆಸರು ಹೇಳಲು ಬಯಸದ ನಾಯಕರೊಬ್ಬರು ತಿಳಿಸಿದ್ದಾರೆ. 2015 ಬಿಬಿಎಂಪಿ ಚುನಾವಣೆಯಲ್ಲಿ ಎಐಎಡಿಎಂಕೆ ಯಿಂದ ಅಭ್ಯರ್ಥಿಗಳು ಸ್ಪರ್ದಿಸಿದ್ದರು, ಆದರೆ ಯಾರೊಬ್ಬರು ಗೆಲುವು ಕಂಡಿರಲಿಲ್ಲ.