ರಾಜ್ಯ

ರಾಸಲೀಲೆ ಪ್ರಕರಣ: ವಿಡಿಯೋದಲ್ಲಿರುವುದು ನಾನೇ, ಬಲವಂತದ ಹೇಳಿಕೆ ಎಂದ ಮಹಿಳೆ

Srinivasamurthy VN

ಬಾಗಲಕೋಟೆ: ರಾಜ್ಯ ಅಬಕಾರಿ ಸಚಿವ ಎಚ್ ವೈ ಮೇಟಿ ವಿರುದ್ಧದ ರಾಸಲೀಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ವಿಜಯಲಕ್ಷ್ಮೀ ಈಗ ಹೊಸ ಹೇಳಿಕೆ ನೀಡಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯಲಕ್ಷ್ಮೀ ಅವರು, ಮೇಟಿ ವಿರುದ್ಧ ಮಾತನಾಡಿರುವ ವಿಡಿಯೋದಲ್ಲಿರುವುದು ನಾನೇ. ಆದರೆ ನಾನು ಸ್ವಯಿಚ್ಛೆಯಿಂದ ಅದರಲ್ಲಿ ಮಾತನಾಡಿರಲ್ಲ ಎಂದು ಹೇಳಿ ಪ್ರಕರಣಕ್ಕೆ  ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಓರ್ವ ಪೇದೆ ಸೇರಿದಂತೆ ನಾಲ್ಕು ಮಂದಿ ತನ್ನನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದು, ಸಚಿವ ಮೇಟಿ ವಿರುದ್ಧ ಲೈಂಗಿಕ ದೌರ್ಜನ್ಯದ ಕುರಿತು ಹೇಳಿಕೆ ನೀಡುವಂತೆ ಬಲವಂತ ಹೆದರಿಕೆ ಹಾಕಿದ್ದರು. ಹೀಗಾಗಿ  ನಾನು ಸಚಿವರ ವಿರುದ್ಧ ಹೇಳಿಕೆ ನೀಡಿದ್ದೆ. ಅದನ್ನು ಮೊಬೈಲ್ ನಲ್ಲಿ ಅವರು ಚಿತ್ರೀಕರಿಸಿಕೊಂಡು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

"ನವೆಂಬರ್ 22ರಂದು ಪೇದೆ ಸುಭಾಷ್ ಮುಗಳಖೋಡ್ ಸೇರಿದಂತೆ ನಾಲ್ವರು ವ್ಯಕ್ತಿಗಳು ತನಗೆ ಕೊಲೆ ಬೆದರಿಕೆ ಹಾಕಿ, ಬಲವಂತವಾಗಿ ಮೇಟಿ ವಿರುದ್ಧ ಹೇಳಿಕೆ ರೆಕಾರ್ಡ್ ಮಾಡಿಸಿಕೊಂಡಿದ್ದರು. ಸಚಿವ ಮೇಟಿಯವರು ತಮಗೆ  ಸಂಬಂಧಿಕರಾಗಿದ್ದು, ಅವರು ನನ್ನನ್ನು ಮಗಳಂತೆ ನೋಡುತ್ತಾರೆ"  ಎಂದು ಸುದ್ದಿಗೋಷ್ಠಿಯಲ್ಲಿ ವಿಜಯಲಕ್ಷ್ಮೀ ಹೇಳಿದ್ದಾರೆ.

ಇದೇ ವೇಳೆ ಪೇದೆ ಸುಭಾಷ್ ಮುಗಳಖೋಡ್ ಜೊತೆ ಇದ್ದ ಇತರ ಮೂವರ ಹೆಸರನ್ನು ಹೇಳಲು ನಿರಾಕರಿಸಿರುವ ವಿಜಯಲಕ್ಷ್ಮೀ, ಕಾಲ ಬಂದಾಗ ಹೆಸರು ಬಹಿರಂಗಪಡಿಸುತ್ತೇನೆ. ನಾನು ಎಲ್ಲಿಯೂ ತಲೆಮರೆಸಿಕೊಂಡಿರಲಿಲ್ಲ. ನನ್ನ  ಮನೆಯಲ್ಲಿಯೇ ಇದ್ದೆ. ಘಟನೆಯಿಂದ ನನ್ನ ಪತಿ ಹಾಗೂ ನನ್ನ ಕುಟುಂಬ ಆಘಾತಕ್ಕೊಳಗಾಗಿದ್ದು, ನನ್ನ ಪತಿ ತೀವ್ರ ಭಯಭೀತರಾಗಿದ್ದಾರೆ. ನನ್ನ ಆರೋಗ್ಯ ಹದಗೆಟ್ಟಿದ್ದು, ಪ್ರಾಣಭೀತಿಯಿಂದ ಬದುಕುತ್ತಿದ್ದೇವೆ. ಯಾರಾದರೂ  ಯಾವಾಗ ಬೇಕಾದರೂ ನನ್ನನ್ನು ಕೊಲೆ ಮಾಡಬಹುದು. ಹೀಗಾಗಿ ಅವರ ಹೆಸರು ಬಹಿರಂಗ ಪಡಿಸಲು ಹೆದರುತ್ತಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.

ಇನ್ನು ಇತ್ತೀಚೆಗೆ ಹೇಳಿಕೆ ಬಿಡುಗೆಡೆ ಮಾಡಿದ್ದ ಇದೇ ವಿಜಯಲಕ್ಷ್ಮಿ ಅವರು, ಸಚಿವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿರುವ ವಿಡಿಯೋದಲ್ಲಿರುವುದು ನಾನಲ್ಲ ಎಂದು ಹೇಳಿದ್ದರು.

SCROLL FOR NEXT