ಉದ್ಯಮಿ ಮತ್ತು ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ
ಚಿತ್ರದುರ್ಗ: ಚಳ್ಳಕೆರೆಯ ಸಾಮಾನ್ಯ ವ್ಯಕ್ತಿಯಾಗಿದ್ದ ಉದ್ಯಮಿ, ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ ಶ್ರೀಮಂತನಾಗಿ ಇದೀಗ ಸಿಬಿಐ ಕಸ್ಟಡಿಯಲ್ಲಿ ಬಂಧಿಯಾಗಿರುವುದರ ಹಿಂದೆ ಭಾರೀ ದೊಡ್ಡ ಕಥೆಯಿದೆ. ಅಡ್ಡದಾರಿ ಹಿಡಿದು ಒಮ್ಮೆಲೆ ಶ್ರೀಮಂತನಾದ ವೀರೇಂದ್ರ ಅಲಿಯಾಸ್ ಪಪ್ಪಿ ಇದೀಗ ಕಂಬಿ ಎಣಿಸುತ್ತಿದ್ದಾನೆ. ಹಣ ಮಾಡುವ ಎಲ್ಲಾ ಬಾಗಿಲುಗಳು ಮುಚ್ಚಿದಾಗ ಜೂಜು, ಕ್ರಿಕೆಟ್ ಬೆಟ್ಟಿಂಗ್ ಮೊದಲಾದ ಅಡ್ಡ ಹಾದಿ ಹಿಡಿದನು.
ವೀರೇಂದ್ರ ಹುಟ್ಟಿದ್ದು ಶ್ರೀಮಂತ ಮನೆತನದಲ್ಲಿ. ಆದರೆ 2000ನೇ ಇಸವಿ ನಂತರ ಕಷ್ಟಗಳು ಆರಂಭವಾಯಿತು. ಆತನ ತಂದೆಯ ಒಡೆತನದ ತೈಲ ಗಿರಣಿ ನಷ್ಟ ಅನುಭವಿಸಿ ಮುಚ್ಚಲ್ಪಟ್ಟಿತು. ತಂದೆ ಚನ್ನಬಸಪ್ಪ ಬೇರೆಯವರ ಗಿರಣಿಯಲ್ಲಿ ಕಾರ್ಮಿಕರಾಗಿ ದುಡಿಯುವ ಪರಿಸ್ಥಿತಿ ಬಂತು.
ಆ ಮುಚ್ಚಲ್ಪಟ್ಟ ಗಿರಣಿಯಲ್ಲಿ ವೀರೇಂದ್ರ ಅಕ್ರಮವಾಗಿ ಹಣ ಮಾಡಲು ಆರಂಭಿಸಿದ. ಜೂಜು ಮತ್ತು ಬೆಟ್ಟಿಂಗ್ ದಂಧೆ ಆರಂಭವಾಯಿತು. ಒಮ್ಮೆ ಹುಬ್ಬಳ್ಳಿಗೆ ಹೋಗಿದ್ದ ಸಂದರ್ಭದಲ್ಲಿ ವೀರೇಂದ್ರಗೆ ಸಮುಂದರ್ ಸಿಂಗ್ ಮತ್ತು ಶ್ರೀನಿವಾಸ್ ಎಂಬುವವರ ಪರಿಚಯವಾಗಿ ಅವರು ಕೂಡ ಈ ಅಕ್ರಮ ಚಟುವಟಿಕೆಗಳಿಗೆ ಸಾಥ್ ಕೊಟ್ಟರು. ನಂತರ ಮೂವರೂ ಸೇರಿಕೊಂಡು ರಾಜ್ಯಾದ್ಯಂತ ವ್ಯವಹಾರ ಆರಂಭಿಸಿದರು.
ನಂತರ ಗೋವಾಗೆ ಹೋಗಿ ಅಲ್ಲಿ ಕಾರ್ಡ್ ಆಟವನ್ನು ನಡೆಸಲು ಅನುಮತಿ ಪಡೆದುಕೊಂಡರು. ಅದಕ್ಕಾಗಿ ಸಾರ್ವಜನಿಕ ರೂಂವೊಂದನ್ನು ಪಡೆದರು. ಅದರಲ್ಲಿ ಅವರಿಗೆ ಚೆನ್ನಾಗಿ ಹಣ ಸಂಗ್ರಹವಾಗಿ ಶ್ರೀಮಂತರನ್ನಾಗಿ ಮಾಡಿತು. ಉದ್ಯಮ ವ್ಯಾಪಕವಾಗುತ್ತಿದ್ದಂತೆ ರಾಜಕೀಯ, ರಿಯಲ್ ಎಸ್ಟೇಟ್ ಗಳತ್ತ ಮುಖ ಮಾಡಿದರು. ಹವಾಲಾ ನಿರ್ವಾಹಕರೂ ಕೂಡ ಆದರು. ವೀರೇಂದ್ರ ಹೊರ ದೇಶಗಳಾದ ನೇಪಾಳ ಮತ್ತು ಶ್ರೀಲಂಕಾದಲ್ಲಿ ಜೂಜು ನಡೆಸುವ ರೂಮೊಂದನ್ನು ಆರಂಭಿಸಿದ್ದು ಅದು ನಿರ್ಮಾಣ ಹಂತದಲ್ಲಿದೆ.
ಅಕ್ರಮವಾಗಿ ಹಣ ಸಂಪಾದಿಸಿದ್ದ ವೀರೇಂದ್ರ ತನ್ನ ಬಳಿಯಿದ್ದ ಕಪ್ಪು ಹಣವನ್ನು ಬಿಳಿ ಮಾಡಲು ಅನೇಕ ಉದ್ಯಮಗಳನ್ನು ಆರಂಭಿಸಿದ್ದ. ಅವುಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕೂಡ ಒಂದು. ಅವುಗಳಲ್ಲಿ ರತ್ನ ಗೋಲ್ಡ್ ಎಂಬ ವ್ಯಾಪಾರವನ್ನು ಆರಂಭಿಸಿದ. ಸಾರ್ವಜನಿಕರಿಂದ ಮಾರುಕಟ್ಟೆ ದರದಲ್ಲಿ ಚಿನ್ನ ಖರೀದಿಸಿ ಹಣ ನೀಡುತ್ತಿದ್ದ. ಆ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಲು ಹೊರಟಿದ್ದ.
ಇದೀಗ ವೀರೇಂದ್ರ ಬಂಧನದ ನಂತರ ಹಲವು ವಿಷಯಗಳು ಮತ್ತು ಕಥೆಗಳು ಹುಟ್ಟಿಕೊಳ್ಳುತ್ತಿದ್ದು ಆತನ ಬಳಿ ದಾಖಲೆಗಳಿಲ್ಲದ 5.7 ಕೋಟಿ ಡಾಲರ್ ಮೌಲ್ಯದ ಸಂಪತ್ತುಗಳಿದ್ದವು. ಇತ್ತೀಚೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಅನೇಕ ಚಿನ್ನ ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಖಚಿತ ಮೂಲಗಳ ಪ್ರಕಾರ, ವೀರೇಂದ್ರ ಮನೆಯ ಬಾತ್ ರೂಂನಲ್ಲಿದ್ದ ರಹಸ್ಯ ಛಾವಣಿಯನ್ನು ಲೋಹದ ಡಿಟೆಕ್ಟರ್ ಮೂಲಕ ಬಹಿರಂಗಪಡಿಸಲಾಯಿತಂತೆ.
ಜಿಲ್ಲಾ ಜೆಡಿಎಸ್ ಘಟಕ ಈ ಪ್ರಕರಣದಿಂದ ದೂರವುಳಿಯಲು ಪ್ರಯತ್ನಿಸುತ್ತಿದ್ದು, ಈ ಬೆಳವಣಿಗೆ ಬಗ್ಗೆ ಕೇಳಿದರೆ, ವೀರೇಂದ್ರ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಕೂಡ ಪಡೆದುಕೊಂಡಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos