ರಾಜ್ಯ

ಅಕ್ರಮ-ಸಕ್ರಮ ಅವಧಿ ವಿಸ್ತರಣೆ

Sumana Upadhyaya
ಬೆಂಗಳೂರು: ಸಣ್ಣ ಪಟ್ಟಣ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಭೂಮಿಗಳಲ್ಲಿ ಮನೆ ಕಟ್ಟಿಕೊಂಡವರ ಸ್ಥಳದ  ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಗಡುವನ್ನು ಸರ್ಕಾರ ಮತ್ತೆ ಒಂದು ತಿಂಗಳು ವಿಸ್ತರಿಸಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ಗ್ರಾಮೀಣ ಭಾಗದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಸಕ್ರಮೀಕರಣ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಡಿಸೆಂಬರ್ 20ರವರೆಗೆ ಗಡುವು ನೀಡಲಾಗಿತ್ತು. ಅದನ್ನು ಮತ್ತೆ ಜನವರಿ 21ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಸಕ್ರಮೀಕರಣಕ್ಕೆ ಸಲ್ಲಿಸುವ ಅರ್ಜಿ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು. 80×50 ವಿಸ್ತೀರ್ಣದ ನಿವೇಶನಕ್ಕೆ ಈಗ 6 ಸಾವಿರ ಶುಲ್ಕ ಪಾವತಿಸಬೇಕು. ಅದು 3 ಸಾವಿರಕ್ಕೆ ಇಳಿಕೆ ಮಾಡಲಾಗಿದೆ ಎಂದರು. ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅರ್ಜಿ ಸಲ್ಲಿಸಿರುವವರಿಂದ ಮಾಹಿತಿ ಪಡೆಯಬೇಕು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.  ನಮೂನೆ 94 ಸಿ ಅಡಿ ಅರ್ಜಿ ಸಲ್ಲಿಸದಿರುವವರಿಗೆ ಅರ್ಜಿ ಸಲ್ಲಿಸುವಂತೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 40 ಲಕ್ಷದಷ್ಟು ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಆದರೆ ಈಗ ವಿಲೇವಾರಿಯಾಗಿರುವ ಅರ್ಜಿಗಳ ಸಂಖ್ಯೆ ಶೇಕಡಾ 2ಕ್ಕಿಂತ ಹೆಚ್ಚಾಗಿಲ್ಲ. ನಗರ ಪ್ರದೇಶದ 30 x40 ಅಡಿ ಅಳತೆಯ ಮನೆ ಸಕ್ರಮೀಕರಣಕ್ಕೂ ತಿದ್ದುಪಡಿ ತರಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ, ಅರ್ಜಿ ಪರಿಶೀಲನೆ, ವಿಲೇವಾರಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಬರ ಪರಿಹಾರಕ್ಕೆ ಮನವಿ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬರ ಪರಿಹಾರಕ್ಕೆ 4,700 ಕೋಟಿ ರೂಪಾಯಿ ಹಾಗೂ ನೆರೆ ಪರಿಹಾರಕ್ಕೆ 360 ಕೋಟಿ ರೂಪಾಯಿ ನೀಡುವಂತೆ ಇತ್ತೀಚೆಗೆ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂ ಗ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.  
ಕೇಂದ್ರ ಸರ್ಕಾರಕ್ಕೆ ಕಾಯದೆ ಸದ್ಯದಲ್ಲಿಯೇ ಬರ ಪರಿಹಾರ ಕೆಲಸಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
SCROLL FOR NEXT