ಕಳೆದ ವರ್ಷದ ಕರಾವಳಿ ಉತ್ಸವದ ಆಮಂತ್ರಣ ಪತ್ರಿಕೆಯ ಮುಖಪುಟ
ಮಂಗಳೂರು: ಕಲೆಯಲ್ಲಿ ಸಂಪೂರ್ಣತೆ ಪಡೆದಾಗ ಕಲಾವಿದರು ತಮ್ಮ ಜೀವನದಲ್ಲಿ ಅತ್ಯುನ್ನತವಾದದ್ದನ್ನು ಸಾಧಿಸಲು ಸಾಧ್ಯವಾಗುವುದು ಮಾತ್ರವಲ್ಲದೆ ಆ ಕಲಾ ಪ್ರಕಾರದಲ್ಲಿ ಅತ್ಯಂತ ಎತ್ತರಕ್ಕೆ ಹೋಗಲು ನೆರವಾಗುತ್ತದೆ ಎಂದು ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಕದ್ರಿ ಪಾರ್ಕ್ ನಲ್ಲಿ ನಿನ್ನೆಯಿಂದ 10 ದಿನಗಳ ಕಾಲ ನಡೆಯಲಿರುವ ಕರಾವಳಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಮಾತನಾಡಿ, ಕರಾವಳಿ ಉತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಲು ತಾಲ್ಲೂಕು ಮಟ್ಟದಲ್ಲಿ ಕರಾವಳಿ ಉತ್ಸವಗಳನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಉತ್ಸವ, ಜಾತ್ರೆ, ಆಚರಣೆಗಳಿಗೆ ಹೆಸರುವಾಸಿ. ಇಂತಹ ಉತ್ಸವಗಳನ್ನು ಕಲಾವಿದರು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉತ್ಸವ ಆರಂಭದಲ್ಲಿ ಕರಾವಳಿ ಉತ್ಸವ ಮೈದಾನದ ಸಮೀಪ ಮೆರವಣಿಗೆ ಕರೆದೊಯ್ಯಲಾಯಿತು. ಯಕ್ಷಗಾನ, ಡೊಲ್ಲು ಕುಣಿತ, ಕೋಲಾಟ, ಗುಂಟೆ ಕುಣಿತ, ವೀರಗಾಸೆ, ದೊಡ್ಡಾಟ, ಹಾಲಕ್ಕಿ ಕುಣಿತ, ಕಂಸಾಳೆ, ಗೊರವರ ಕುಣಿತ ಮೊದಲಾದವುಗಳು ಸೇರಿದಂತೆ 70ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮೆರವಣಿಗೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.