ರಾಜ್ಯ

ಚಿಕ್ಕಬಳ್ಳಾಪುರ: 900 ಸಿಲಿಂಡರ್ ಸ್ಫೋಟ, 2 ಲಾರಿ ಮತ್ತು ಟೆಂಪೊ ಭಸ್ಮ

Sumana Upadhyaya
ಚಿಕ್ಕಬಳ್ಳಾಪುರ: ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಾಗೇಪಲ್ಲಿ ಎಚ್.ಪಿ.ಗ್ಯಾಸ್ ಸಿಲಿಂಡರ್ ಗೋಡೌನ್ ನಲ್ಲಿ 900ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟಗೊಂಡಿದೆ. ಎರಡು ಲಾರಿಗಳಲ್ಲಿ  ತುಂಬಿಸಿಟ್ಟಿದ್ದ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡು ಇಡೀ ನಾಶವಾಗಿದೆ. ಪಕ್ಕದಲ್ಲಿ ನಿಂತಿದ್ದ ಸಿಲೆಂಡರ್ ಸಾಗಿಸುವ ಬೊಲೆರೊ ವಾಹನಕ್ಕೆ ಕೂಡ ಬೆಂಕಿ ಹತ್ತಿಕೊಂಡಿದೆ.ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. 
ಚಿಂತಾಮಣಿ- ಬಾಗೇಪಲ್ಲಿ ಮಾರ್ಗಮಧ್ಯದಲ್ಲಿರುವ ಚೋಕೆನಲ್ಲಿ ಗೇಟ್ ಬಳಿ ಎಸ್ಎಲ್ಎನ್ ಗ್ಯಾಸ್ ಸಿಲಿಂಡರ್ ಗೋದಾಮಿನಲ್ಲಿ ಕಳೆದ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. 
ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬ್ಯಾಟರಿಯ ಶಾರ್ಟ್ ಸರ್ಕ್ಯೂಟ್ ನಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿವೆ. 
ನಿನ್ನೆ ಭಾನುವಾರವಾದ್ದರಿಂದ ಗ್ಯಾಸ್ ಎಜೆನ್ಸಿಯ ಸಿಬ್ಬಂದಿಗಳು ಮನೆಗೆ ತೆರಳಿದ್ದರು. ರಾತ್ರಿ ವೇಳೆ ಈ ಅಗ್ನಿ ಅವಘಡ ನಡೆದಿದ್ದು ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಅಲ್ಲದೆ ಗ್ಯಾಸ್ ಗೋದಾಮಿನ ಸಮೀಪ ರಾಜೀವ್ ಗಾಂಧಿ ವಸತಿ ಶಾಲೆಯಿದ್ದು ಹಗಲಿನಲ್ಲಿ ಈ ಅಪಘಾತ ಸಂಭವಿಸಿದ್ದಿದ್ದರೆ ಪರಿಣಾಮ ಭೀಕರವಾಗಿರುತ್ತಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸಿಲಿಂಡರ್ ಸ್ಫೋಟದ ಶಬ್ದಕ್ಕೆ ಹೆದರಿ ಸುತ್ತಮುತ್ತಲ ಜನರು ಮತ್ತು ವಸತಿ ಶಾಲೆಯಲ್ಲಿದ್ದ ಮಕ್ಕಳು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿಗೆ ತಕ್ಷಣ ತಿಳಿಸಿದಾಗ ಹೆಚ್ಚಿನ ಅನಾಹುತ ತಪ್ಪಿಸಲಾಯಿತು.
ಸ್ಥಳಕ್ಕೆ ತಹಸೀಲ್ದಾರ್ ಗಂಗಣ್ಣ, ಡಿವೈಎಸ್ ಪಿ ಕೃಷ್ಣಮೂರ್ತಿ, ಎಸ್ ಪಿ ಚೈತ್ರಾ, ಗ್ಯಾಸ್ ಎಜೆನ್ಸಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT