ರಾಜ್ಯ

ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಪ್ರಕರಣ: ತನಿಖೆ ಆರಂಭಿಸಿದ ಸಿಐಡಿ ಅಧಿಕಾರಿಗಳು

Manjula VN

ಬೆಳಗಾವಿ: ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಹಾಗೂ ಅಪಹರಣ ಪ್ರಕರಣವನ್ನು ಸಿಐಡಿಗೆ ತನಿಖೆಗೆ ವರ್ಗಾಯಿಸಲಾಗಿದ್ದು, ಸಿಐಡಿ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.

ನಿನ್ನೆಯಷ್ಟೇ ಸವದತ್ತಿ ತಾಲೂಕಿನ ಮುರ್ಗುಡ್ ಗ್ರಾಮಕ್ಕೆ ಸಿಐಡಿ ವಿಭಾಗದ ಡಿಐಜಿ ಸೋನಿಯಾ ನಾರಂಗ್ ನೇತೃತ್ವದ ತಂಡ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

ತನಿಖೆ ವೇಳೆ ಸೋನಿಯಾ ಅವರು ಕಲ್ಲಪ್ಪ ಅವರ ಪತ್ನಿ ವಿದ್ಯಾ, ತಂದೆ ಹಾಗೂ ಇತರೆ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಕಲ್ಲಪ್ಪ ಅವರ ಮರಣೋತ್ತರ ವರದಿಗಾಗಿ ಸಿಐಡಿ ಕಾಯುತ್ತಿದೆ ಎಂದು ಸೋನಿಯಾ ನಾರಂಗ್ ಅವರು ಹೇಳಿದ್ದು, ಇನ್ನಿತರೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಮೂಲಗಳ ಪ್ರಕಾರ ಚಿಕ್ಕಮಗಳೂರು ಅಪಹರಣ ಪ್ರಕರಣ ಸಂಬಂಧ ಅಧಿಕಾರಿಗಳು ಈಗಾಗಲೇ ನಾಲ್ವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ಪ್ರತ್ಯೇಕ ಸಿಐಡಿ ತಂಡವೊಂದು ಅಪಹರಣ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.

ವಿಚಾರಣೆ ವೇಳೆ ಕಲ್ಲಪ್ಪ ಅವರ ಪತ್ನಿ ವಿದ್ಯಾ ಅವರು ಹೇಳಿಕೆ ನೀಡಿದ್ದು, ಪತಿಯ ಪ್ರಮಾಣಿಕತೆ ಅವರಿಗೆ ಸಮಸ್ಯೆಯುಂಟು ಮಾಡಿ, ಅವರ ಜೀವಕ್ಕೆ ಮುಳುವಾಯಿತು. ನನ್ನ ಪತಿ ಚಿಕ್ಕಮಗಳೂರಿನಲ್ಲಿ ಕಳೆದ 2 ವರ್ಷಗಳಿಂದಲೂ ನೆಲೆಯೂರಿದ್ದು, ಹೊರಗೆ ಆಗಲಿ ಅಥವಾ ಪೊಲೀಸ್ ಇಲಾಖೆಯಲ್ಲಿಯೇ ಆಗಲೀ ಒಬ್ಬ ವ್ಯಕ್ತಿ ಕೂಡ ಅವರ ಬಗ್ಗೆ ದೂರು ನೀಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

SCROLL FOR NEXT