ರಾಜ್ಯ

ಮಾನ್ಸೂನ್ ನಲ್ಲಿ ಅಧಿಕವಾಗುತ್ತಿರುವ ಡೆಂಗ್ಯು ಪ್ರಕರಣ; 1,187 ಜನರಲ್ಲಿ ಪತ್ತೆ

Sumana Upadhyaya
ಬೆಂಗಳೂರು: ಈ ವರ್ಷ ಮುಂಗಾರು ಮಳೆಯ ಸಂದರ್ಭದಲ್ಲಿ  ರಾಜ್ಯಾದ್ಯಂತ ಡೆಂಗ್ಯು ಪೀಡಿತರ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಮೇ 31ಕ್ಕೆ  ನಮ್ಮ ರಾಜ್ಯದಲ್ಲಿ 5 ಸಾವಿರದ 821 ಶಂಕಿತ ಡೆಂಗ್ಯು ಪ್ರಕರಣಗಳು ವರದಿಯಾದರೆ ಅವರಲ್ಲಿ 834 ಮಂದಿಯಲ್ಲಿ ಡೆಂಗ್ಯು ಜ್ವರ ದೃಢಪಟ್ಟಿದೆ. ಜುಲೈ 6ರ ವೇಳೆಗೆ ಡೆಂಗ್ಯು ಪೀಡಿತರ ಸಂಖ್ಯೆ ಸಾವಿರದ 187ಕ್ಕೆ ತಲುಪಿದೆ.
ಸರ್ಕಾರದ ಆರೋಗ್ಯ ಇಲಾಖೆ ದಾಖಲೆಗಳ ಪ್ರಕಾರ, ಇದುವರೆಗೆ ಡೆಂಗ್ಯು ಜ್ವರಕ್ಕೆ ಉಡುಪಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿರುವುದು ಬಿಟ್ಟರೆ ಬೇರೆ ವರದಿಯಾಗಿಲ್ಲ. ಆದರೆ ಸ್ವತಂತ್ರ ಪರಿಶೀಲನೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಾವಿನ ಆಡಿಟ್ ಸಮಿತಿ ಕಳೆದ ತಿಂಗಳು 8ರಂದು ಸಭೆ ನಡೆಸಿತ್ತು. ಅದರ ವರದಿ ಆರೋಗ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟವಾಗಬೇಕಿದೆ. ಹಾಗಾಗಿ ಇನ್ನೂ ಡೆಂಗ್ಯು ಜ್ವರದಿಂದ ಸಾವನ್ನಪ್ಪಿರುವವರ ಸಂಖ್ಯೆ 4ಕ್ಕೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಡೆಂಗ್ಯು ಪೀಡಿತರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. 319 ಕೇಸುಗಳು ದಾಖಲಾಗಿವೆ. ನಂತರ ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಿವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಬ್ಬರ್ ಮತ್ತು ಅಡಿಕೆ ತೋಟಗಳು ಹೆಚ್ಚಾಗಿರುವುದರಿಂದ ಅಲ್ಲಿ ಡೆಂಗ್ಯುವಿಗೆ ಕಾರಣವಾಗುವ ಸೊಳ್ಳೆ ಉತ್ಪತ್ತಿಯಾಗುವುದು ಅಧಿಕ ಎಂದು ವೈದ್ಯರು ತಿಳಿಸಿದ್ದಾರೆ.
ಡೆಂಗ್ಯು ಲಕ್ಷಣಗಳು: ನಾಲ್ಕೈದು ದಿನಗಳವರೆಗೆ ಜ್ವರ ಕಾಣಿಸಿಕೊಳ್ಳುವುದು, ತಲೆನೋವು, ಸ್ನಾಯುಶೂಲೆ ಮತ್ತು ರಕ್ತಸ್ರಾವ ಮೊದಲಾದವುಗಳು ಕಂಡುಬರುತ್ತವೆ. ಡೆಂಗ್ಯೂ, ಮಲೇರಿಯಾ ಹಾಗೂ ಇನ್ಫ್ಲುಯೆನ್ಸ ಜ್ವರಗಳಲ್ಲಿ ಹೆಚ್ಚು ಕಡಿಮೆ ಒಂದೇ ಲಕ್ಷಣಗಳು ಕಾಣುತ್ತವೆ. ಕಣ್ಣಿನ ಹಿಂದೆ ವಿಪರೀತ ನೋವು, ಶೀತ ಡೆಂಗ್ಯು ಜ್ವರದ ಪ್ರಮುಖ ಲಕ್ಷಣಗಳು. 
SCROLL FOR NEXT