ಬೆಂಗಳೂರು: ತರಕಾರಿ ಮಾರುಕಟ್ಟೆಯಲ್ಲಿ ಚಿನ್ನಾಭರಣ ಧರಿಸಿರುವ ವೃದ್ಧ ಮಹಿಳೆಯರನ್ನು ದೋಚುತ್ತಿದ್ದ 9 ಮಂದಿಯ ತಂಡವನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರಿನ ವೆಂಕಟೇಶ್ (33) ದುರ್ಗಪ್ಪ (60) ಶೇಷಮ್ಮ (50) ಸುಶೀಲಮ್ಮ (50) ನಾಗಮ್ಮ (60) ಆಂಜಿನಪ್ಪ (35) ಶ್ಯಾಮಣ್ಣ (55) ತಿಪ್ಪೇಶ್ (32) ನಾಗರಾಜ್ ದೇಸಾಯಿ (60) ಬಂಧಿತರು. ಇವರಿಂದ 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಯಶವಂತಪುರದಲ್ಲಿ ಜು.10ರಂದು ಬಿ.ಕೆ. ನಗರದ ನಿವಾಸಿ ಗೌರಮ್ಮ ಬೆಳಗ್ಗೆ 10.30ಕ್ಕೆ ತರಕಾರಿ ತೆಗೆದುಕೊಂಡು ಮನೆಗೆ ಮರಳುತ್ತಿದ್ದರು. 40 ವರ್ಷದ ಮಹಿಳೆ ನಿಲ್ಲಿಸಿ ‘ನನ್ನ ಮಗಳು ಮದುವೆಯಾಗದೇ ಗರ್ಭಿಣಿಯಾಗಿದ್ದಾಳೆ. ಆಸ್ಪತ್ರೆಗೆ ಹೋಗಬೇಕು, ವಿಳಾಸ ದಯವಿಟ್ಟು ತೋರಿಸಿ’ ಎಂದು ಕೇಳಿಕೊಂಡಿದ್ದಾಳೆ. ನಂತರ ಗೌರಮ್ಮ ಆಸ್ಪತ್ರೆ ವಿಳಾಸ ಹೇಳಿದ್ದಾರೆ.
ಅಷ್ಟರಲ್ಲಿ ಮಾತು ಆರಂಭಿಸಿದ ಮಹಿಳೆ ನನ್ನ ಬಳಿ ಹಣ ಇಲ್ಲ. ಈ ಚಿನ್ನದ ಒಡವೆ ಇಟ್ಟುಕೊಂಡು ಹಣ ನೀಡಿ ಎಂದಾಗ ಗೌರಮ್ಮ ನಿರಾಕರಿಸಿದ್ದಾರೆ. ನಿಮ್ಮ ಸರಕ್ಕಿಂತ ಹೆಚ್ಚಿನ ತೂಕ ಬರುತ್ತದೆ. ನಿಮ್ಮ ಸರ ಅಡವಿಟ್ಟು ಹೆಚ್ಚಿನ ಮೌಲ್ಯದ ಈ ಸರ ಇಟ್ಟುಕೊಳ್ಳಿ’ ಎಂದು ಪುಸಲಾಯಿಸಿದ್ದಾಳೆ. ಇದೇ ವೇಳೆ ಇಬ್ಬರು ಮಧ್ಯಪ್ರವೇಶಿಸಿ ಸರ ಕೊಟ್ಟರೆ ಹಣ ನೀಡುವುದಾಗಿ ಹೇಳಿದ್ದಾರೆ. ಗೌರಮ್ಮ 49 ಗ್ರಾಂ ಚಿನ್ನದ ಸರ ನೀಡುತ್ತಿದ್ದಂತೆ ಎಲ್ಲರೂ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.
ಕೂಡಲೆ ಗೌರಮ್ಮ ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸ್ಐ ಬಿ.ಕೆ. ನರಸಿಂಹನ್ ಮತ್ತು ರಾಜಾರಾಮ್ ತಕ್ಷಣ ಕಾರ್ಯಪ್ರವೃತ್ತರಾಗಿ ಒಬ್ಬ ಆರೋಪಿಯನ್ನು ಅದೇ ದಿನ ವಶಕ್ಕೆ ಪಡೆದಿದ್ದರು.