ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ (ಸಂಗ್ರಹ ಚಿತ್ರ)
ಮೈಸೂರು: ಧಾರವಾಡ ಜಿಲ್ಲೆಯ ನವಲಗುಂದದ ಯಮನೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಯಮನೂರು ಗ್ರಾಮಸ್ಥರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಟಿವಿಯಲ್ಲಿ ನೋಡಿದ ನನಗೆ ನಿಜಕ್ಕೂ ತೀವ್ರ ನೋವುಂಟಾಯಿತು. ವೃದ್ಧರು ಮಹಿಳೆಯರು ಎನ್ನದೇ ಮನೆಗೇ ನುಗ್ಗಿ ಪೊಲೀಸರು ಥಳಿಸುತ್ತಿದ್ದಾರೆ. ಇದನ್ನು ನೋಡಿದ ನನಗೆ ನಾವೇನಾದರೂ ಬ್ರಿಟೀಷ್ ಆಡಳಿತದ ಅಡಿಯಲ್ಲಿ ಇದ್ದೇವೆಯೋ ಎಂಬ ಭಾವನೆ ಬಂತು. ಸರ್ಕಾರ ಬದುಕಿದೆಯೋ ಸತ್ತಿದೆಯೋ ಗೊತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲ ಎಂದು ಕಿಡಿಕಾರಿದರು.ಟ
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹಾಗೂ ಗೃ ಸಚಿವ ಪರಮೇಶ್ವರ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಸಚಿವ ವಿನಯ್ ಕುಲಕರ್ಣಿಗೆ ಮನುಷ್ಯತ್ವವೇ ಇಲ್ಲ. ಜನರ ಕೊಲ್ಲಲೆಂದೇ ಉಸ್ತುವಾರಿ ಸಚಿವರಾಗಿಗಿದ್ದಾರೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ಗೃಹ ಸಚಿವ ಪರಮೇಶ್ವರ್ ಅವರು ಟಿವಿ ನೋಡಿಲ್ಲವೇ ಅಥವಾ ಕರ್ನಾಟಕದಲ್ಲೇ ಇಲ್ಲವೇ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅಂತೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ವಿರುದ್ಧ ಕಿಡಿಕಾರಿದ ಅವರು, ಪೊಲೀಸ್ ಮಹಾ ನಿರ್ದೇಶಕ ಸ್ಥಾನಕ್ಕೆ ಓಂ ಪ್ರಕಾಶ್ ಅವರು ಅರ್ಹ ವ್ಯಕ್ತಿಯಲ್ಲ. ಅವರು ಅನ್ ಫಿಟ್ ಫೆಲೋ ಎಂದು ಕಿಡಿಕಾರಿದರು.
ಗ್ರಾಮದಲ್ಲೇ ಒಂದು ವಾರ ಉಳಿದು ಆತ್ಮ ಸ್ಥೈರ್ಯ ತುಂಬುತ್ತೇನೆ
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಪೊಲೀಸ್ ದೌರ್ಜನ್ಯಕ್ಕೊಳಗಾಗಿರುವ ನವಲಗುಂದದ ಯಮನೂರು ಮತ್ತು ಗೌಡರ ಓಣಿ ಗ್ರಾಮಗಳಿಗೆ ತಾವು ಭೇಟಿ ನೀಡುತ್ತೇವೆ. ಅಮಾಯಕರು ಪ್ರತಿಭಟನೆಯಲ್ಲಿ ಬಲಿಯಾಗಬಾರದು. ಇದೇ ಕಾರಣಕ್ಕಾಗಿ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಲ್ಲದೆ ಒಂದು ವಾರಗಳ ಅಲ್ಲೇ ಇದ್ದು ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬುತ್ತೇನೆ. ಅಲ್ಲದೆ ಗ್ರಾಮಸ್ಥರ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸುತ್ತೇನೆ. ತಾಕತ್ತಿದ್ದರೆ ಪೊಲೀಸರು ನನ್ನ ಮೇಲೆ ಕೈ ಮಾಡಲಿ ಎಂದು ಸವಾಲು ಹಾಕಿದರು.