ರಾಜ್ಯ

ಬೆಂಗಳೂರು: ಕ್ಯಾಬ್, ಆಟೋಗಳ ಗಾಜು ಪುಡಿಪುಡಿ, ರಸ್ತೆಯಲ್ಲಿ ಟೈರ್ ಗೆ ಬೆಂಕಿ

Srinivasamurthy VN

ಬೆಂಗಳೂರು: ಮಹದಾಯಿ ತೀರ್ಪು ವಿರೋಧಿಸಿ ಆಚರಣೆ ಮಾಡಲಾಗುತ್ತಿರುವ ಕರ್ನಾಟಕ ಬಂದ್ ಬಿಸಿ ರಾಜಧಾನಿ ಬೆಂಗಳೂರಿಗೂ ವ್ಯಾಪಕವಾಗಿ ತಟ್ಟಿದ್ದು, ನಗರದಾದ್ಯಂತ ವ್ಯಾಪಕ  ಪ್ರತಿಭಟನೆ ನಡೆಸಲಾಗುತ್ತಿದೆ.

ಬಂದ್ ಕರೆ ನೀಡಿದ್ದರೂ ರಸ್ತೆಗಿಳಿದ ಕ್ಯಾಬ್ ಮತ್ತು ಆಟೋಗಳ ವಿರುದ್ಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ  ರಸ್ತೆಗಳಿದಿದ್ದ ಕ್ಯಾಬ್ ಮತ್ತು ಆಟೋಗಳ ಗಾಜುಗಳನ್ನು ಒಡೆಯುವ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ರಸ್ತೆಯಲ್ಲಿ  ಬರುತ್ತಿದ್ದ ಕ್ಯಾಬ್ ಗೆ ದೊಣ್ಣೆಯಿಂದ ಹೊಡೆಯುವ ಮೂಲಕ ಕಾರಿನ ಗಾಜನ್ನು ಪುಡಿಗಟ್ಟಿದರು. ಅಲ್ಲದೆ ರಸ್ತೆಯಲ್ಲಿ ಬರುತ್ತಿದ್ದ ಕಾರು ಮತ್ತು ಆಟೋಗಳನ್ನು ವಾಪಸ್ ಕಳುಹಿಸದರು.

ನಾಗವಾರದಲ್ಲಿ ಅಣಕು ಶವಯಾತ್ರೆ

ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ನಾಗವಾರದಲ್ಲಿ ಸಂಸದರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಣುಕ ಶವಯಾತ್ರೆ ನಡೆಸಿದರು.  ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಅಣುಕ ಶವಯಾತ್ರೆ ನಡೆಸಿದ ಕಾರ್ಯಕರ್ತರು ಬಳಿಕ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು  ಚದುರಿಸಿದರು.

ಇನ್ನು ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿಯೂ ಬಂದ್ ಆಚರಣೆ ಮಾಡಲಾಗುತ್ತಿದ್ದು, ಕನ್ನಡಪರ ಸಂಘಟನೆಯ ಕಾರ್ಯಕರ್ತ ತೆರೆಯಲಾಗಿದ್ದ ಅಂಗಡಿಗಳನ್ನು ಬಲವಂತವಾಗಿ  ಮುಚ್ಚಿಸಿದರು. ಸಿಟಿ ಮಾರುಕಟ್ಟೆಯಲ್ಲೂ ಇಂತಹುದೇ ಘಟನೆ ನಡೆದಿದ್ದು, ಮಾರುಕಟ್ಟೆ ಆವರಣದಲ್ಲಿ ತೆರೆಯಲಾಗಿದ್ದ ಅಗತ್ಯ ವಸ್ತುಗಳ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಇನ್ನು  ನಗರದ ಪ್ರಮುಖ ಮಾಲ್ ಗಳು ಮುಚ್ಚಲ್ಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಮಾಲ್ ಗಳಿಗೆ ಬಲೆಗಳನ್ನು ಅಳವಡಿಸಲಾಗಿದೆ. ಅಲ್ಲದೆ ಮಾಲ್ ಆವರಣದಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ.  ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್, ರಾಜಾಜಿನಗರದ ಒರಿಯಾನ್ ಮಾಲ್, ಮೈಸೂರು ರಸ್ತೆಯ ಗೋಪಾಲನ್ ಮಾಲ್ ಸೇರಿದಂತೆ ಪ್ರಮುಖ ಮಾಲ್ ಗಳ ಸ್ಥಗಿತಗೊಂಡಿವೆ.

ಇನ್ನು ಜನನಿಭಿಡ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿಯೂ ಕೂಡ ಬಂದ್ ಆಚರಣೆ ಮಾಡಲಾಗುತ್ತಿದ್ದು, ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ. ಇನ್ನು ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೆಜೆಸ್ಟಿಕ್ ನ ರೈಲು ನಿಲ್ದಾಣಕ್ಕೆ ನುಗ್ಗಿದ ಕನ್ನಡಪರ ಕಾರ್ಯಕರ್ತರು ರೈಲು  ತಡೆ ನಡೆಸಿದರು.

ಒಟ್ಟಾರೆ ರಾಜಧಾನಿ ಬೆಂಗಳೂರಿನಲ್ಲೂ ಕೂಡ ಬಂದ್ ಬಿಸಿಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

SCROLL FOR NEXT