ಮಹದಾಯಿ ತೀರ್ಪು ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಚಾರ್ಜ್
ನವಲಗುಂದ: ಇಡೀ ರಾಜ್ಯದ ಆಕ್ರೋಶಕ್ಕೆ ಕಾರಣವಾಗಿರುವ ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ನವಲಗುಂದದಲ್ಲಿ ಪ್ರತಿಭಟನೆ ನಡೆಸಿದ ರೈತರಿಗೆ ಶನಿವಾರ ಪೊಲೀಸರು ತಮ್ಮ ಲಾಠಿ ರುಚಿ ತೋರಿಸಿ, ಗ್ರಾಮಸ್ಥರು ಬೆಚ್ಚಿ ಬೀಳುವಂತೆ ಮಾಡಿದ್ದಾರೆ.
ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದ ಧಾರವಾಡ ಜಿಲ್ಲೆಯ ನವಲಗುಂದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಅಲ್ಲದೆ ರಸ್ತೆ ತಡೆದು, ಟೈರ್ ಗೆ ಬೆಂಕಿ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪೊಲೀಸರೊಂದಿಗೆ ವಾಕ್ಸಮರ ಕೂಡ ನಡೆಸಿದ್ದರು. ಇದಾದ ಬಳಿಕ ಅಂದರೆ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದ ರೈತರ ಮನೆಗಳಿಗೆ ನುಗ್ಗಿದ ಪೊಲೀಸರು ಮನೆಯೊಳಗಿದ್ದ ರೈತರನ್ನು ಹೊರಗೆ ಎಳೆದು ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಧಾರವಾಡ ಜಿಲ್ಲೆಯ ಯಮನೂರು, ಗೌಡರ ಓಣಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರು ಮಕ್ಕಳು ಎನ್ನದೇ ಸಿಕ್ಕ ಸಿಕ್ಕವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಈ ಪೈಶಾಚಿಕ ಕೃತ್ಯದಿಂದಾಗಿ ಹೆದರಿರುವ ಗ್ರಾಮದ ಗಂಡಸರು ಗ್ರಾಮವನ್ನೇ ತೊರೆದು ಹೋಗಿದ್ದಾರೆ ಎಂದು ಅಲ್ಲಿನ ಮಹಿಳೆಯರು ಆರೋಪಿಸಿದ್ದಾರೆ. ಘಟನೆ ಬಳಿಕ ಇದೀಗ ಈ ಗ್ರಾಮಗಳಲ್ಲಿ ಸ್ಮಶಾನಮೌನ ಆವರಿಸಿದ್ದು, ಇಡೀ ಗ್ರಾಮವೇ ಖಾಲಿಯಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಗ್ರಾಮ ತೊರೆದಿರುವ ಗಂಡಸರು ತಮ್ಮ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಸ್ವತಃ ಅವರ ಕುಟುಂಬಸ್ಥರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪೊಲೀಸರೇ ಅವರನ್ನು ಬಂಧಿಸಿದ್ದಾರೆ ಎಂದು ಅಲ್ಲಿನ ಮಹಿಳೆಯರು ಆರೋಪಿಸಿದ್ದಾರೆ. ಅಲ್ಲದೆ ಪೊಲೀಸರ ಹೊಡೆತದಿಂದಾಗಿ ತಮ್ಮ ಮೈ ಮೇಲೆ ಬಂದಿರುವ ಬಾಸುಂಡೆಗಳನ್ನು ತೋರಿಸಿ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾಪತ್ತೆಯಾಗಿರುವ ತಮ್ಮ ಮನೆಯ ಗಂಡಸರನ್ನು ಮನೆಗೆ ವಾಪಸ್ ಬರುವಂತೆ ಮಾಡಿ ಎಂದು ಕೇಳಿಕೊಂಡಿದ್ದಾರೆ.