ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಕನ್ನಡ ಚಿತ್ರರಂಗದ ತಾರೆಯರು ನಡೆಸುತ್ತಿರುವ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಗೈರಾಗಲು ತಂದೆಯ ಅನಾರೋಗ್ಯವೇ ಕಾರಣ ಎಂದು ಖ್ಯಾತ ಚಿತ್ರನಟ ಕಿಚ್ಚಾ ಸುದೀಪ್ ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಅವರು ನಮ್ಮ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ನಾನು ಅವರ ಯೋಗಕ್ಷೇಮ ವಿಚಾರಣೆಗೆ ನಾನು ಇರಲೇ ಬೇಕಾಗಿದೆ. ಹೀಗಾಗಿ ಚಿತ್ರತಾರೆಯರ ರ‍್ಯಾಲಿಯಲ್ಲಿ ತಾವು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಕಾವೇರಿಯಾಗಲಿ ಅಥವಾ ಮಹದಾಯಿಯಾಗಲಿ ಕರ್ನಾಟಕದ ರೈತರ ಬೆಂಬಲಕ್ಕೆ ತಾವು ಸದಾ ಸಿದ್ದರಿರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋಧ್ಯಮ ಕೂಡ ಬೆಂಬಲ ನೀಡಿದ್ದು, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ಖ್ಯಾತ ನಟರಾದ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ನಟ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ಮೇಘನಾ ರಾಜ್, ನಟ ಪ್ರಜ್ವಲ್ ದೇವರಾಜ್, ನಟ ಪಂಕಜ್, ನಟಿ ಹೇಮಾ ಚೌದರಿ, ಚಿತ್ರ ನಟ ಚಿರಂಜೀವಿ ಸರ್ಜಾ, ರಂಗಾಯಣ ರಘು, ಶೃತಿ, ಜಗ್ಗೇಶ್, ಚಿರಂಜೀವಿ ಸರ್ಜಾ, ಜೈಜಗದೀಶ್, ನಿರ್ದೇಶಕ ಶಶಾಂಕ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.