ರಾಜ್ಯ

ವಿರೋಧಕ್ಕೆ ಕಾರಣವಾದ 'ಎತ್ತಿನಹೊಳೆ ಯೋಜನೆ' ಛಾಯಾಚಿತ್ರ ಪ್ರದರ್ಶನ

Manjula VN

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನ ಹೊಳೆ ಯೋಜನೆ ಕುರಿತು ಪರ-ವಿರೋಧದ ಕೂಗುಗಳು ಕೇಳಿಬರುತ್ತಿದ್ದು, ಈ ಪರ-ವಿರೋಧದ ಸಂವಾದಕ್ಕೆ ಭಾನುವಾರ ನಡೆದ ಛಾಯಾಚಿತ್ರ ಪ್ರದರ್ಶನವೊಂದು ವೇದಿಕೆಯಾಗಿತ್ತು.

ನಗರದ ಜಿಲ್ಲಾ ಫೋಟೋ ಸ್ಟುಡಿಯೋ ಮಾಲೀಕರ ಸಂಘವು ಚಿತ್ರಕಲಾ ಪರಿಷತ್ ನಲ್ಲಿ ಭಾನುವಾರ ಎತ್ತಿನಹೊಳೆ ಯೋಜನೆ ಕುರಿತಂತೆ ಛಾಯಾಚಿತ್ರ ಪ್ರದರ್ಶನವೊಂದನ್ನು ಏರ್ಪಡಿಸಿತ್ತು. ಈ ಛಾಯಾಚಿತ್ರವನ್ನು ವೀಕ್ಷಿಸಲು ಭಾರತೀಯ ರೈತ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪ್ರೊ.ನರಸಿಂಹಪ್ಪ ಅವರು ಬಂದಿದ್ದಾರೆ.

ಈ ವೇಳೆ ಎತ್ತಿನಹೊಳೆ ಯೋಜನೆ ಕುರಿತಂತೆ ಇದ್ದ ಛಾಯಾಚಿತ್ರಗಳನ್ನು ನೋಡಿದ್ದ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು.

ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ ಹಲವು ದಿನಗಳ ಕನಸಾಗಿದೆ. ಯೋಜನೆ ಅತ್ಯಂತ ಪರಿಸರ ಸ್ನೇಹಿಯಾಗಿದ್ದು, ಕುಡಿಯುವ ನೀರಿನ ಯೋಜನೆ ಇದಾಗಿದೆ. ಈ ಯೋಜನೆಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಒಂದೆರಡು ಕಡೆ ಮರಗಳನ್ನು ಕಡಿದಿರುವುದನ್ನೇ ಇತರೆ ಆಯಾಗಳಿಂದ ಫೋಟೋಗಳನ್ನು ತೆಗೆದು ತೋರಿಸಿ ಜನರನ್ನು ಹಾದಿ ತಪ್ಪಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಕುಡಿಯಲು ನೀರಿಲ್ಲ. ಟ್ಯಾಂಕ್ ನೀರುಗಳ ಮೇಲೆ ಅವಲಂಬಿತರಾಗಿದ್ದಾರೆ. ಯೋಜನೆ ಹಲವು ಜನರಿಗೆ ಸಹಾಯಕವಾಗಲಿದೆ. ಆದರೆ, ಕೆಲವರು ಈ ಯೋಜನೆಗೆ ಅಡ್ಡಪಡಿಸಲು ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಛಾಯಾಚಿತ್ರ ಪ್ರದರ್ಶನ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸಿರುವ ಶೆಟ್ಟಿ ಹಾಗೂ ಇನ್ನಿತರೆ ಜನರು ಯೋಜನೆಯ ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಇನ್ನು ಛಾಯಾಚಿತ್ರ ಪ್ರದರ್ಶನ ಕುರಿತಂತೆ ಮಾಡನಾಡಿರುವ ಸುಧೀರ್ ಶೆಟ್ಟಿ ಅವರು, ನರಸಿಂಹಪ್ಪ ಅವರು ಯೋಜನೆ ತಜ್ಞರಾಗಿದ್ದಾರೆ. ನರಸಿಂಹಪ್ಪ ಹಾಗೂ ಕೆಲವರು ಛಾಯಾಚಿತ್ರ ಪ್ರದರ್ಶನಕ್ಕೆ ಬಂದು ಆವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಪರಿಶ್ರಮ ಎತ್ತಿನಹೊಳೆ ಯೋಜನೆ ಕಾರ್ಯ ನಡೆಯುತ್ತಿರುವ ಪ್ರದೇಶದಲ್ಲಿರುವ ವಾಸ್ತವಿಕತೆಯನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಿದೆ ಎಂದಿದ್ದಾರೆ.

ನಾನು ಯೋಜನೆ ಅನುಷ್ಠಾನಗೊಳ್ಳುತ್ತಿರುವ ಪ್ರದೇಶಕ್ಕೆ ತೆರಳಿದ್ದೆ. ಅಲ್ಲಿ ಸುತ್ತಾಡಿ ಛಾಯಾಚಿತ್ರಗಳನ್ನು ತೆಗೆದಿದ್ದೇನೆ. ನಾವು ಯಾರ ದಿಕ್ಕನ್ನು ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

SCROLL FOR NEXT