ರಾಜ್ಯ

ಪೊಲೀಸನ ತ್ವರಿತ ಚಿಂತನೆ ಅಪಘಾತ ಸಂತ್ರಸ್ತನ ಜೀವ ಉಳಿಸಿತು

Manjula VN

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಪೊಲೀಸನ ತ್ವರಿತ ಚಿಂತನೆಯೊಂದು ಅಪಘಾತ ಸಂತ್ರಸ್ತನ ಜೀವ ಉಳಿಸಿರುವ ಘಟನೆಯೊಂದು ಸೋಮವಾರ ವಾರ ನಡೆದಿದೆ.

ರಸ್ತೆ ದಾಟುವ ವೇಳೆ ಕಾರೊಂದು ಡಿಕ್ಕಿ ಹೊಡೆದು ರಕ್ತದ ಮಡುವಿನಲ್ಲಿ ಬಿದ್ದು ಚೀರಾಡುತ್ತಿದ್ದ ಯುವಕನೊಬ್ಬನನ್ನು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ರಕ್ಷಿಸಿದ್ದಾರೆ.

ಎ.ಎಂ ಶಿವರಾಜ್ (28) ಅಪಘಾತದಲ್ಲಿ ಗಾಯಗೊಂಡವರು, ಗಾರ್ಮೆಂಟ್ಸ್ ನಲ್ಲಿ ತಂಡದ ನಾಯಕನಾಗಿ ಕೆಲಸ ಮಾಡುತ್ತಿರುವ ಇವರು ಹೊಸೂರು ರಸ್ತೆಯ ನಾಗನಾಥ ಪುರ ಜಂಕ್ಷನ್ ಸಮೀಪ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದಿರುವ ಉಬರ್ ಕ್ಯಾಬ್ ಒಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯಗೊಂಡ ಶಿವರಾಜ್ ಅವರು ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು.

ಈ ವೇಳೆ ಸ್ಥಳೀಯರು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟ್ ಮೊಹಮ್ಮದ್ ಎಂ.ಎ ಅವರು ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಅ್ಯಂಬುಲೆನೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ, ನಗರದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದ ಕಾರಣ ಆ್ಯಂಬುಲೆನ್ಸ್ ಬರುವುದು ತಡವಾಗಿದೆ.

ಈ ವೇಳೆ ಎಚ್ಚೆತ್ತ ಮೊಹಮ್ಮದ್ ಅವರು ಆ್ಯಂಬುಲೆನ್ಸ್ ಗೆ ಕಾಯುತ್ತಿದ್ದರೆ, ತಡವಾಗುತ್ತದೆ ಎಂದು ತಿಳಿದು ತಮ್ಮ ಜೀಪಿನಲ್ಲೇ ಶಿವರಾಜ್ ಅವರನ್ನು ಕರೆದುಕೊಂಡು ಇನ್ಫೋಸಿಸ್ ಕನ್ವೆನ್ಷನ್ ಸೆಂಟರ್ ಬಳಿರುವ ಸ್ಪಿಂಗ್ ಲೀಫ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಒಂದು ವೇಳೆ ಶಿವರಾಜ್ ಅವರು ಆಸ್ಪತ್ರೆಗೆ ದಾಖಲಾಗುವುದು 2.25 ನಿಮಿಷ ತಡವಾಗಿದ್ದರು ಅವರ ಸ್ಥಿತಿ ಚಿಂತಾಜನಕವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಸ್ಥಳಕ್ಕೆ ಬಂದಾಗ ಶಿವರಾಜ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಆತ ಬದುಕಿರುವುದು ತಿಳಿಯಿತು. ಆ್ಯಂಬುಲೆನ್ಸ್ ಕರೆ ಮಾಡಿದೆವು. ಆ ಸಮಯದಲ್ಲಿ ಒಂದೊಂದು ನಿಮಿಷ ಕೂಡ ನಮಗೆ ಅತ್ಯಂತ ಮುಖ್ಯವಾಗಿತ್ತು. ಹೀಗಾಗಿ ಆ್ಯಂಬುಲೆನ್ಸ್ ಕಾಯುವುದು ಸರಿಯಲ್ಲ ಎಂದೆನಿಸಿ ಜೀಪ್ ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದೆವು ಎಂದು ಮೊಹಮ್ಮದ್ ಅವರು ಹೇಳಿದ್ದಾರೆ.

ಅಪಘಾತವಾದಾಗ ಸಾರ್ವಜನಿಕರು ಆ್ಯಂಬುಲೆನ್ಸ್ ಹಾಗೂ ಪೊಲೀಸರಿಗಾಗಿ ಕಾಯಬಾರದು. ಸಂತ್ರಸ್ತನನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಬೇಕು. ನಗರ ಬೆಳೆಯುತ್ತಿದ್ದರು ಇಂದಿಗೂ ಅಪಘಾತವಾದ ಸಂದರ್ಭದಲ್ಲಿ 100-150 ಮಂದಿ ಸುಮ್ಮನೆ ನೋಡಿಕೊಂಡೇ ಇರುತ್ತಾರೆಂದು ಅವರು ಹೇಳಿದ್ದಾರೆ.

ಪೊಲೀಸನ ಈ ಕಾರ್ಯಕ್ಕೆ ಪ್ರತ್ಯದರ್ಶಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೊಸೂರು ರಸ್ತೆಯಲ್ಲಿ ಆ್ಯಂಬುಲೆನ್ಸ್ ಗಳು ಯಾವಾಗಲೂ ತಡವಾಗಿ ಬರುತ್ತವೆ. ರಸ್ತೆಗಳು ವಾಹನಗಳಿಂದ ಆವೃತ್ತಗೊಂಡಿರುತ್ತವೆ. ಇಂದು ನಡೆದ ಘಟನೆಯಲ್ಲಿ ಪೊಲೀಸರು ಉದಾಹರಣೆಯೊಂದನ್ನು ನೀಡಿದ್ದಾರೆ ಎಂದು ಹೊಸೂರು ರಸ್ತೆಯಲ್ಲಿರುವ ಕಂಪನಿಯೊಂದರ ಉದ್ಯೋಗಿ ನಾಗರಾಜ್ ಅವರು ಹೇಳಿದ್ದಾರೆ.

SCROLL FOR NEXT