ರಾಜ್ಯ

ಕೆಪಿಎಸ್ಸಿ ಹಗರಣಕ್ಕೆ ತಾರ್ಕಿಕ ಅಂತ್ಯ ಹಾಡಬೇಕಿದೆ: ಹೈಕೋರ್ಟ್

Shilpa D

ಬೆಂಗಳೂರು: ಕೆಪಿಎಸ್‌ಸಿ ಬಗ್ಗೆ ಮಹತ್ವದ ತೀರ್ಪು ಬರೆಯಲು ಹೈಕೋರ್ಟ್‌ಗೆ ಒಂದು ಸದವಕಾಶ ಸಿಕ್ಕಿದೆ. ಈ ರಾಜ್ಯದ ಶ್ರೀ ಸಾಮಾನ್ಯ ಕೆಪಿಎಸ್‌ಸಿ ಎಂಬ ಸಾಂವಿಧಾನಿಕ ಸಂಸ್ಥೆ ಏನು ಮಾಡುತ್ತಿದೆ ಹಾಗೂ ಹೇಗಿದೆ ಎಂಬ ಬಗ್ಗೆ ತಿಳಿಯಲು ಉತ್ಸುಕನಾಗಿದ್ದಾನೆ, ಇದಕ್ಕೆ ಒಂದು ತಾರ್ಕಿಕ ಅಂತ್ಯ ನೀಡಬೇಕಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.

1998, 1999 ಹಾಗೂ 2004ರಲ್ಲಿ ನೇಮಕಗೊಂಡ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಎನ್‌.ಕುಮಾರ್ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠವು ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ಯಾಂ ಭಟ್‌ ಅವರ ಹೆಸರನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿರುವ ಕಡತವನ್ನು ರಾಜ್ಯಪಾಲರು ಯಾಕೆ ವಾಪಸು ಕಳಿಸಿದ್ದಾರೆ ಎಂದು ಪ್ರಶ್ನಿಸಿರುವ ಹೈಕೋರ್ಟ್‌ ಈ ಸಂಬಂಧದ ಎಲ್ಲ ದಾಖಲೆಗಳನ್ನು ಒದಗಿಸಿ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

2011ರ ಬ್ಯಾಚ್‌ನಲ್ಲಿನ ಅಕ್ರಮಗಳ ಬಗ್ಗೆ, ಮಾಜಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ಅವರ ಸಂಪೂರ್ಣ ಇತಿಹಾಸ, ಸದಸ್ಯೆ ಮಂಗಳಾ ಶ್ರೀಧರ್‌ ಅಮಾನತುಗೊಂಡಿದ್ದಕ್ಕೆ ಕಾರಣ ಹಾಗೂ ಈ ಕುರಿತಂತೆ ಸಿಐಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯ ವಿವರಗಳನ್ನೆಲ್ಲಾ  ಕೋರ್ಟ್‌ಗೆ ಹಾಜರುಪಡಿಸಿ ಎಂದು ನ್ಯಾಯಮೂರ್ತಿ ಕುಮಾರ್‌ ಮೌಖಿಕ ನಿರ್ದೇಶನ ನೀಡಿದರು.

2012 ರಲ್ಲಿ ಕೆ.ಆರ್ ಖಲೀಲ್ ಅಹ್ಮದ್ 1998, 1999 ಹಾಗೂ 2004ರಲ್ಲಿ ನೇಮಕಗೊಂಡ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

SCROLL FOR NEXT