ಬಳ್ಳಾರಿ: ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ರಾಜಿನಾಮೆ ಪ್ರಕರಣ ಹೊಸ ತಿರುವು ಪಡೆದಿದ್ದು, ಅವರು ರಾಜಿನಾಮೆ ನೀಡಿದ ಜೂನ್ 4ರ ದಿನಾಂಕವನ್ನೇ ಉಲ್ಲೇಖಿಸಿರುವ ಏಳು ಪುಟದ ದೂರು, ಅವರ ಆಪ್ತರೊಬ್ಬರ ಮೂಲಕ ರಾಜ್ಯ ಮಹಿಳಾ ಆಯೋಗಕ್ಕೆ ತಲುಪಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ನನಗೆ ಕಿರುಕುಳ ನೀಡುತ್ತಿದ್ದರು. ಕೆಲಸದಲ್ಲಿ ನನ್ನ ಅಧೀನ ಅಧಿಕಾರಿಗಳು ಸಹಕರಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಾನು ರಾಜೀನಾಮೆ ನೀಡಲು ಚೇತನ್ ಅವರೇ ಕಾರಣರಾಗಿರುತ್ತಾರೆ ಎಂದು ಆರೋಪಿಸಿದ್ದಾರೆ.
ಜನವರಿಯಲ್ಲಿ ಅನ್ಯಕಾರ್ಯ ನಿಮಿತ್ತ ನನ್ನನ್ನು ಇಂಡಿಗೆ ನಿಯೋಜಿಸಿದಾಗ ಮಾನಸಿಕ ಒತ್ತಡಕ್ಕೆ ಒಳಗಾಗಿ 19 ದಿನ ಕಾಯಿಲೆ ರಜೆ ಹಾಕಿ ಊರಿಗೆ ತೆರಳಿದ್ದೆ. ಈ ಸಮಯದಲ್ಲಿ ಪೊಲೀಸ್ ಠಾಣೆಯ ಗೌಪ್ಯ ದಾಖಲೆಗಳನ್ನು ಎಸ್ಪಿ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು ಎಂದು ದೂರವಾಗಿದೆ.
ನನ್ನ ಪರವಾಗಿ ಜನ ಪ್ರತಿಭಟನೆ ನಡೆಸುತ್ತಿದ್ದಾಗಲೇ, ಒಒಡಿ ಚಾಲನಾ ಆದೇಶವನ್ನು ಡಿವೈಎಸ್ಪಿ ಮೂಲಕ ಮನೆಗೆ ಕಳಿಸಿದ್ದರು. ಆ ಆದೇಶ ರದ್ದಾಗಿ ಕೂಡ್ಲಿಗಿಗೆ ಬಂದ ಬಳಿಕ ಕ್ಷುಲ್ಲಕ ಕಾರಣಗಳಿಗೆ ಮೆಮೊ ನೀಡುತ್ತಿದ್ದರು. ಜೂನ್ 4ರಂದು ಕೂಡ್ಲಿಗಿ ಡಿವೈಎಸ್ಪಿ ಕಚೇರಿ ಮುಂದೆ ನಡೆದ ಪ್ರತಿಭಟನೆಗೂ ಅವರೇ ಕುಮ್ಮಕ್ಕು ನೀಡಿದ್ದರು ಎಂದು ಅನುಪಮಾ ಆರೋಪಿಸಿದ್ದಾರೆ.
ಕಾಯಿಲೆಗಾಗಿ ಪಡೆದಿದ್ದ ರಜೆಯ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ರಜೆ ಚೀಟಿಯನ್ನು ವೈದ್ಯಕೀಯ ಮಂಡಳಿ ಪರಿಶೀಲನೆಗೆ ಮೇ ತಿಂಗಳಲ್ಲಿ ರವಾನಿಸಿದ್ದಾರೆ ಎಂದು ದೂರಿರುವ ಅವರು, ದೂರು ಅರ್ಜಿ ವಿಚಾರಣೆಯನ್ನು ಪೊಲೀಸರಿಗೆ ನೀಡದೇ, ಆಯೋಗವೇ ನಡೆಸಬೇಕು ಎಂದು ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಆರ್. ಚೇತನ್, ಅನುಪಮಾ ವಿಚಾರದಲ್ಲಿ, ಇತರ ಅಧೀನ ಅಧಿಕಾರಿಗಳೊಂದಿಗೆ ವರ್ತಿಸುವಂತೆ ಕಾನೂನು ಪ್ರಕಾರವೇ ನಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಅನುಪಮಾ ಅವರಿಗೆ ಕಿರುಕುಳ ನೀಡಲೇಬೇಕೆಂದಿದ್ದರೆ, ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವಿನಾಕಾರಣ ವರದಿ ಬರೆಯಬಹುದಿತ್ತು. ಸಹೋದ್ಯೋಗಿಗಳ ಮುಂದೆ ಅವರನ್ನು ಅವಮಾನಿಸಬಹುದಿತ್ತು. ಆದರೆ ಹಾಗೆ ಎಂದಿಗೂ ವರ್ತಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.