ರಾಜ್ಯ

ಕರೆ ಬೇಡ ವಾಟ್ಸಪ್ ಮಾಡಿ: ಮೈಸೂರು ಕಾರ್ಪೋರೇಟರ್ಸ್

Manjula VN

ಮೈಸೂರು: ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳು ಇತ್ತೀಚಿನ ದಿನಗಳಲ್ಲಿ ನಾಗರೀಕರಿಗೆ ವರವಾಗಿ ಪರಿಣಮಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲ ಕಾರ್ಪೊರೇಟರ್ ಗಳು ಇದೀಗ ನಾಗರೀಕರ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ.

ಮೈಸೂರಿನ ಕಾರ್ಪೊರೇಟರ್ ಗಳಾದ ಜೆ.ಎಸ್ ಜಗದೀಶ್ ಮತ್ತು ಡಿ. ನಾಗಭೂಷಣ್ ಅವರು ವಾಟ್ಸ್ ಅಪ್ ನಲ್ಲಿ 15-18 ಗುಂಪುಗಳನ್ನು ರಚಿಸಿದ್ದು, ವಾಟ್ಸ್ ಅಪ್ ಮೂಲಕವೇ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಸ್ಥಳೀಯರ ತಮ್ಮ ಪ್ರದೇಶದಲ್ಲಿ ಏನೇ ಸಮಸ್ಯೆಗಳಿದ್ದರೂ ಆ ಸಮಸ್ಯೆಯ ಫೋಟೋವನ್ನು ತೆಗೆದು ವಾಟ್ಸ್ ಅಪ್ ನಲ್ಲಿ ಹಾಕಬೇಕು. ಇದನ್ನು ಅಧಿಕಾರಿಗಳು ಗಮನಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಜಗದೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾಗೂ ದೂರು ದಾಖಲಿಸಲು ಈ ಹಿಂದೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದವು. ಕಚೇರಿಗಳಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಕಾರ್ಪೊರೇಟರ್ ಗಳೊಂದಿಗೆ ಮಾತನಾಡಲು ಅವಕಾಶಗಳು ಸಿಗುತ್ತಿರಲಿಲ್ಲ. ಇದೀಗ ವಾಟ್ಸ್ ಅಪ್ ಗ್ರೂಪ್ ನಮಗೆ ಸಹಾಯಕವಾಗಿದೆ. ನಮ್ಮ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಪರಿಹರಿಸಲಾಗುತ್ತಿದೆ ಎಂದು ಶಾರದಾದೇವಿ ನಗರದ ನಿವಾಸಿ ವಿಮಲಾ ಅವರು ಹೇಳಿದ್ದಾರೆ.

ನಾಗರಿಕರ ಸಮಸ್ಯೆ ಆಲಿಸಲು ನಾವು 17ಕ್ಕೂ ಹೆಚ್ಚು ವಾಟ್ಸ್ ಅಪ್ ಗುಂಪನ್ನು ರಚಿಸಿದ್ದೇವೆ. ವಾಟ್ಸ್ ಅಪ್ ಮೂಲಕ ನಾಗರೀಕರು ಆಯಾ ಪ್ರದೇಶದಲ್ಲಿನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದರಂತೆ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ವಾಟ್ಸ್ ಅಪ್ ಗುಂಪಿನಿಂದಾಗಿ ನಾಗರೀಕರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದಿನದಲ್ಲಿ 5-15 ಸಮಸ್ಯೆಗಳು ಬರುತ್ತಿರುತ್ತದೆ ಎಂದು ವಾರ್ಡ್ ನಂ.22 ಕಾರ್ಪೊರೇಟರ್ ಜೆ.ಎಸ್ ಜಗದೀಶ್ ಅವರು ಹೇಳಿದ್ದಾರೆ.

8 ತಿಂಗಳಿನಿಂದ ನಾನು ವಾಟ್ಸ್ ಅಪ್ ನ್ನು ಬಳಕೆ ಮಾಡುತ್ತಿದ್ದೇನೆ. ಈಗಾಗಲೇ ವಾಟ್ಸ್ ಅಪ್ ನಲ್ಲಿ ಸಾಕಷ್ಟು ಗುಂಪುಗಳನ್ನು ರಚಿಸಲಾಗಿದ್ದು. ಜನರು ಗುಂಪಿನಲ್ಲಿ ಸಮಸ್ಯೆಯನ್ನು ಹೇಳುತ್ತಿರುತ್ತಾರೆ. ಸಮಸ್ಯೆಯನ್ನು ಆಲಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ದಿನಕ್ಕೆ 12 ರಿಂದ 15 ಸಮಸ್ಯೆಗಳು ಬರುತ್ತಿತ್ತದೆ ಎಂದು ವಾರ್ಡ್ ನಂ.34 ರ ಕಾರ್ಪೊರೇಟರ್ ನಾಗಭೂಷಣ್ ಅವರು ಹೇಳಿದ್ದಾರೆ.

SCROLL FOR NEXT