ರಾಜ್ಯ

ರಾಜ್ಯಾದ್ಯಂತ ಮುಂಗಾರು ದುರ್ಬಲ; ಮುಂಬರುವ ವಾರಗಳಲ್ಲಿ ಚೇತರಿಕೆ ಸಾಧ್ಯತೆ

Manjula VN

ಬೆಂಗಳೂರು: ಬರದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿ ಸುರಿಯಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿ ಇದೀಗ ಸುಳ್ಳಾಗಿದ್ದು, ರಾಜ್ಯದ ಹಲವೆಡೆ ಮುಂಗಾರು ಮಳೆ ದುರ್ಬಲವಾಗಿದೆ.

ಜೂ.9ರ ನಂತರ ರಾಜ್ಯದಾದ್ಯಂತ ಮುಂಗಾರು ಮಳೆ ಪ್ರವೇಶಿಸಲಿದ್ದು, ಈ ಬಾರಿ ಮುಂಗಾರು ಮಳೆ ದೊಡ್ಡಮಟ್ಟದಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ, ಈಗ ಮುಂಗಾರು ದುರ್ಬಲಗೊಂಡಿದ್ದು, ಮುಂದಿನ ವಾರಗಳಲ್ಲಿ ಮುಂಗಾರು ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ಮಾಹಿತಿ ನೀಡಿರುವ ಪ್ರಕಾರ ಕಳೆದ ವರ್ಷದಂತೆಯೇ ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಲಾಶಯಗಳಲ್ಲಿನ ನೀರು ಈವರೆಗೂ ಸಾಮಾನ್ಯ ಮಟ್ಟಕ್ಕೂ ತಲುಪಿಲ್ಲ ಎಂದು ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ವಿಜ್ಞಾನಿ ಎಸ್ಎಸ್ಎಂ ಗವಾಸ್ಕರ್ ಅವರು, ಮಲೆನಾಡು ಪ್ರದೇಶಗಳಲ್ಲಿ ಶೀಘ್ರದಲ್ಲೇ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಮಳೆಯಾದ ನಂತರ ಜಲಾಶಯಗಳಲ್ಲಿನ ನೀರಿನ ಮಟ್ಟ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ವರದಿಗಳು ತಿಳಿಸಿರುವ ಪ್ರಕಾರ, ಜೂನ್.22 ವರೆಗೆ ರಾಜ್ಯದಲ್ಲಿ 133.2 ಮಿ.ಮೀ ರಷ್ಟು ಪ್ರಮಾಣ ಮಳೆಯಾಗಿದೆ ಎಂದು ತಿಳಿದುಬಂದಿದೆ. ಮಲೆನಾಡು ಮತ್ತು ಕರಾವಳಿ ತೀರ ಪ್ರದೇಶಗಳಲ್ಲಿಯೂ ಮುಂಗಾರು ಮಳೆಯ ಅಬ್ಬರ ಕಳೆಗುಂದಿದ್ದು, ಸಾಮಾನ್ಯ ಮಟ್ಟದಲ್ಲಿ ಮಳೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬರಗಾಲದಿಂದಾಗಿ ಕಂಗೆಟ್ಟಿದ್ದ ಉತ್ತರ ಕರ್ನಾಟಕ ಭಾಗದ ಜನರಿಗೆ ಈ ಸಾಮಾನ್ಯ ಮಟ್ಟದ ಮಳೆಕೊಂಚ ಮಟ್ಟಿಗೆ ನಿರಾಳ ನೀಡಿದೆ.

SCROLL FOR NEXT