ಬೆಂಗಳೂರು: ಕುಂದಾಪುರದಲ್ಲಿ ನಡೆದ ಶಾಲಾವಾಹನ ಅಪಘಾತ ದುರ್ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆಯು ಇದೀಗ ಶಾಲಾ ವಾಹನಗಳ ಮೇಲೆ ಕಣ್ಗಾವಲಿರಿಸಲು ಸುರಕ್ಷತಾ ಸಮಿತಿಯನ್ನು ನೇಮಿಸುವಂತೆ ಶಾಲೆಗಳಿಗೆ ಸೂಚನೆ ನೀಡಿದೆ.
ಶಾಲಾ ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಸಾಕಷ್ಟು ನಿಯಮಗಳನ್ನು ಹೇರಿದ್ದರು ಕೂಡ ಈ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆ ವೇಳೆ ಶಾಲಾ ಆಡಳಿತ ಮಂಡಳಿಗಳು ವಾಹನಗಳ ಮೇಲೆ ಕಣ್ಗಾವಲಿರಿಸಲು ಸುರಕ್ಷತಾ ಸಮಿತಿಯೊಂದನ್ನು ರಚಿಸುವಂತೆ ಸೂಚಿಸಿದೆ.
ಈ ಕುರಿತಂತೆ ಮಾತನಾಡಿರುವ ಸಾರಿಗೆ ಆಯುಕ್ತ ರಾಮೇಗೌಡ ಅವರು, ಮಕ್ಕಳನ್ನು ಶಾಲೆಗೆ ಕರೆತರುವ ಹಾಗೂ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವ ಶಾಲಾ ವಾಹನಗಳಿಗೆ ಶಾಲಾ ಆಡಳಿತ ಮಂಡಳಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಶಾಲಾ ವಾಹನಗಳ ಮೇಲೆ ಕಣ್ಗಾವಲಿರಿಸಲು ಶಾಲಾ ಆಡಳಿತ ಮಂಡಳಿ ಸಮತಿಯೊಂದನ್ನು ರಚಿಸಬೇಕು. ಸಮಿತಿ ರಚನೆಗೆ ಅವಶ್ಯವಿರುವ ಮಾರ್ಗಸೂಚಿಗಳನ್ನು ನಾವು ನೀಡುತ್ತೇವೆಂದು ಹೇಳಿದ್ದಾರೆ.
ಮಕ್ಕಳ ಸುರಕ್ಷತೆ ಶಾಲೆ ಹಾಗೂ ಮಕ್ಕಳ ಪೋಷಕರ ಜವಾಬ್ದಾರಿಯಾಗಿರುತ್ತದೆ. ಕೆಲ ಪೋಷಕರು ವಾಹನಗಳನ್ನು ಪರೀಕ್ಷೆ ಮಾಡದೆಯೇ ಮಕ್ಕಳನ್ನು ಕಳುಹಿಸಿಕೊಡುತ್ತಾರೆ. ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಮಾರುತಿ ಓಮ್ನಿ ವ್ಯಾನ್ ಗಳಂತಹ ವಾಹನಗಳನ್ನು ಪೋಷಕರು ವಿರೋಧಿಸಬೇಕು. ಪೋಷಕರು ವಿರೋಧ ವ್ಯಕ್ತಪಡಿಸಿದರೆ ಇಂತಹ ವಾಹನಗಳನ್ನು ಶಾಲೆ ನಿಯೋಜಿಸುವುದಿಲ್ಲ ಎಂದು ಹೇಳಿದ್ದಾರೆ.