ಬೆಂಗಳೂರು: ಇಂದು(ಜೂನ್ 26) ಅಂತರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಅಕ್ರಮ ಸಾಗಾಣಿಕೆ ತಡೆ ವಿರೋಧಿ ದಿನ. ಇತ್ತೀಚೆಗಷ್ಟೇ ಬಿಡುಗಡೆಯಾದ ಉಡ್ತಾ ಪಂಜಾಬ ಹಿಂದಿ ಚಿತ್ರದಲ್ಲಿ ಪಂಜಾಬ್ ನಲ್ಲಿ ನಡೆಯುತ್ತಿರುವ ವ್ಯಾಪಕ ಮಾದಕ ವಸ್ತು ದಂಧೆಯ ಬಗ್ಗೆ ವಿವರಿಸಲಾಗಿದೆ.
ಇಂದು ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಇದು ಕೂಡ ಒಂದು. ಹೆಚ್ಚಾಗಿ ಯುವಕ,ಯುವತಿಯರು ಮಾದಕ ವಸ್ತುಗಳ ಬಳಕೆಯ ವ್ಯಸನಕ್ಕೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಇದರ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಇದರ ದಂಧೆ ಇನ್ನೂ ಹೆಚ್ಚು.
ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಬಳಕೆ ಮತ್ತು ಮಾರಾಟವನ್ನು ಮಟ್ಟಹಾಕುವಲ್ಲಿ ಪೊಲೀಸರು ಇನ್ನೂ ಯಶಸ್ವಿಯಾಗಿಲ್ಲ. ಈ ದಂಧೆಯಲ್ಲಿ ತೊಡಗಿರುವವರು ಕೋಡ್ ಶಬ್ದ ಬಳಸುತ್ತಿರುವುದರಿಂದ ಪೊಲೀಸರ ಕಣ್ಣಿಗೂ ಸಿಗದೆ ತಪ್ಪಿಸಿಕೊಳ್ಳುತ್ತಾರೆ.
ಆನ್ ಲೈನ್ ಮೂಲಕ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಿ ಗ್ರಾಹಕರಿಗೆ ಅಕ್ರಮವಾಗಿ ಸಾಗಿಸುವ ಕಾರ್ಯ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇಲ್ಲಿ ಮಾದಕ ವಸ್ತು ಮಾರಾಟ ಮಾಡುವ ಗುಂಪು ಇರುತ್ತದೆ. ಅವರು ಇಂಟರ್ ನೆಟ್ ಮೂಲಕ ಕೋಡ್ ಶಬ್ದ ಬಳಸಿ ವ್ಯವಹಾರ ನಡೆಸುತ್ತಾರೆ. ಅವರು ಮಾದಕ ವಸ್ತುವನ್ನು ಕೊರಿಯರ್ ಅಥವಾ ಸ್ಥಳೀಯ ವ್ಯಾಪಾರಿಗಳ ಮೂಲಕ ಸಾಗಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿರುವ ಪ್ರಕರಣ ಕಡಿಮೆಯಾದರೂ ಕೂಡ ಪೂರೈಕೆ ಸಿಕ್ಕಾಪಟ್ಟೆ ಏರಿಕೆಯಾಗಿದೆ.
ಹೆಚ್ಚಿನ ರಾಸಾಯನಿಕ ಡ್ರಗ್ಸ್ ಗಳು ಆಫ್ರಿಕನ್ ರಾಷ್ಟ್ರಗಳಿಂದ ಕಳ್ಳಸಾಗಾಣೆಯಾಗುತ್ತಿವೆ. ಆದರೆ ತನಿಖೆ ವೇಳೆ ವಿದೇಶಿ ಪ್ರಜೆಗಳು ಸಿಕ್ಕಿಹಾಕಿಕೊಳ್ಳುವುದು ಕಡಿಮೆ. ಯಾಕೆಂದರೆ ಅವರು ಸ್ಥಳೀಯರನ್ನು ವಸ್ತುಗಳ ಪೂರೈಕೆಗೆ ಬಳಸಿಕೊಳ್ಳುತ್ತಾರೆ. ಸ್ಥಳೀಯ ವ್ಯಾಪಾರಿಗಳು ಅವರ ವ್ಯವಹಾರಕ್ಕೆ ಮುಖ್ಯ ಮಧ್ಯಸ್ಥಿಕೆದಾರರು. ಮರಿಜುವಾನಾ ಎಂಬ ಮಾದಕ ವಸ್ತು ಹೆಚ್ಚಾಗಿ ಮಾರಾಟವಾಗುತ್ತಿದ್ದು, ಇದರಿಂದಲೇ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಬೆಂಗಳೂರು ಪೊಲೀಸರು.
ಬೆಂಗಳೂರು ನಗರ ಪೊಲೀಸ್, ಕೇಂದ್ರ ಅಪರಾಧ ವಿಭಾಗದ ಮಹಿಳೆಯರು ಮತ್ತು ಮಾದಕ ವಸ್ತುಗಳ ವಿಭಾಗದ ಎಸಿಪಿ ಶಾಂತ ಕುಮಾರ್, ನಿಷೇಧಿತ ಡ್ರಗ್ಸ್ ಗಳನ್ನು ಸಾಮಾಜಿಕ ತಾಣದಲ್ಲಿ ಪ್ರಚಾರ ಮಾಡುತ್ತಾರೆ. ಮಾದಕ ವಸ್ತು ಮಾರಾಟಗಾರರ ಕೋಡ್ ಶಬ್ದವನ್ನು ಪತ್ತೆಹಚ್ಚಿ ಅವರನ್ನು ಹಿಡಿಯಲು ಪ್ರಯತ್ನಿಸುತ್ತೇವೆ. ಇಂತಹ ಒಂದು ಕೇಸನ್ನು ನಾವು ಪತ್ತೆಹಚ್ಚಿದ್ದು, ಸುಶಿಲ್ ಎಂಬ ವ್ಯಕ್ತಿ ಆನ್ ಲೈನ್ ಮೂಲಕ ಮರಿಜುವಾನಾವನ್ನು ಮಾರಾಟ ಮಾಡುತ್ತಿದ್ದ. ಅದೇ ವಿಭಾಗದಿಂದ ನಾವು ಮತ್ತೆರಡು ಕೇಸನ್ನು ಪತ್ತೆಹಚ್ಚುತ್ತಿದ್ದೇವೆ ಎಂದು ಹೇಳಿದರು.
ಹೆಚ್ ಎಸ್ ಆರ್ ಲೇಔಟ್, ಕೊತನೂರು, ಹೆಣ್ಣೂರು, ಮಡಿವಾಳ, ಕೆ.ಆರ್.ಪುರಂ ಬೆಂಗಳೂರು ನಗರದಲ್ಲಿ ಮಾದಕ ವಸ್ತು ಮಾರಾಟದ ಪ್ರಮುಖ ತಾಣಗಳಾಗಿವೆ.