ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಜರ್ಮನಿಯ ಮ್ಯೂನಿಚ್ ರೀತಿ ಸುರಕ್ಷಿತ ನಗರವನ್ನಾಗಿ ಮಾಡಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶುಕ್ರವಾರ ಹೇಳಿದ್ದಾರೆ.
10 ದಿನಗಳ ಕಾಲ ಜರ್ಮನಿಯ ಪ್ರವಾಸದಿಂದ ವಾಪಸ್ ಆಗಿರುವ ಪರಮೇಶ್ವರ ಅವರು ಇಂದು ವಿಧಾನಸೌಧದಲ್ಲಿ ತಮ್ಮ ಪ್ರವಾಸ ಅನುಭವವನ್ನು ಹಂಚಿಕೊಂಡರು. ಜರ್ಮನಿಯ ಬೊವೇರಿಯನ್ ಸರ್ಕಾರದ ಕೋರಿಕೆ ಮೇರೆಗೆ ನಾನು ಪ್ರವಾಸಕ್ಕೆ ಹೋಗಿದ್ದೆ. ಅಲ್ಲದೆ ರಾಜ್ಯದ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿಗೆ ಕರೆದೊಯ್ದಿದ್ದೆ ಎಂದರು.
ಬೊವೇರಿಯನ್ ಸರ್ಕಾರ ಮ್ಯೂನಿಚ್ ನಗರವನ್ನು ಸೇಫ್ ಸಿಟಿ ಎಂದು ಘೋಷಿಸಿದೆ. ಹಿರಿಯರು, ಮಹಿಳೆಯರು ಹಾಗೂ ಮಕ್ಕಳಿಗೆ ಅದು ಸೇಫ್ ಸಿಟಿ ಎಂದು ಅಲ್ಲಿನ ಜನರೇ ಹೇಳಿದ್ದಾರೆ. ಹೀಗಾಗಿ ನಮ್ಮವರೂ ಆ ವ್ಯವಸ್ಥೆ ಹಾಗೂ ಸುರಕ್ಷತೆ ಬಗ್ಗೆ ಕಲಿಯಲಿ ಎಂದು ಪ್ರವಾಸಕ್ಕೆ ಕರೆದೊಯ್ದಿದ್ದೆ ಎಂದರು.
ಜರ್ಮನಿಯ ನಾಗರಿಕರ ಜೊತೆ ನಾವು ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಪೊಲೀಸರ ಸ್ನೇಹ, ಸಹಕಾರ, ಟ್ರಾಫಿಕ್ ಸೆಕ್ಯುರಿಟಿ, ಸೈಬರ್ ಕ್ರೈಂ ಹಾಗೂ ಅಪರಾಧಕ್ಕೆ ಸಂಬಂಧಿಸಿದಂತೆ ಮಹತ್ತರ ವಿಚಾರಗಳ ಚುರಿತು ಚರ್ಚೆ ನಡೆಸಿದ್ದೇವೆ. ಜರ್ಮನ್ ಪದ್ದತಿಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಕುರಿತು ಚಿಂತನೆ ನಡೆಸಿದ್ದು, ಜರ್ಮನ್ ನಲ್ಲಿರುವ ಸಂಚಾರಿ ನಿಯಮ, ಅಪರಾಧ ತನಿಖೆ ಪೊಲೀಸ್ ತರಬೇತಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಇವೆಲ್ಲವನ್ನೂ ನಮ್ಮಲ್ಲಿ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿದ್ದೇವೆ ಎಂದರು.
ಬೆಂಗಳೂರು ನಗರವನ್ನು ಹೆಚ್ಚು ಸುರಕ್ಷತಾ ನಗರವನ್ನಾಗಿ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿಯೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತೆರಳಿ, ಸುರಕ್ಷತೆಗೆ ಸಂಬಂಧಿಸಿದಂತೆ, ಜರ್ಮನ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪರಮೇಶ್ವರ ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಸೇರಿದಂತೆ, ಹಲವು ಸವಾಲುಗಳು ಸರ್ಕಾರದ ಮುಂದಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧವಿರುವುದಾಗಿ ಗೃಹ ಸಚಿವರು ಹೇಳಿದ್ದಾರೆ.