ಮಂಗಳೂರು: ಆರ್ ಟಿಐ ಕಾರ್ಯಕರ್ತರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸೋಮವಾರ ಬೆಳಗ್ಗೆ ಮಂಗಳೂರಿನಲ್ಲಿ ನಡೆದಿದೆ.
ವಿನಾಯಕ ಪಾಂಡುರಂಗ ಬಾಳಿಗ (50) ಎಂಬವರು ಬೆಳಗ್ಗೆ 5.30ರ ವೇಳೆಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಬೆಸೆಂಟ್ ಕಾಲೇಜು ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬಾಳಿಗ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಳಿಗ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ಬಾಳಿಗ ಅವರು ಸಾವನ್ನಪ್ಪಿದ್ದರು.
ನಗರದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳ ಬಗ್ಗೆ ಬಾಳಿಗ ಮಾಹಿತಿ ಕಲೆ ಹಾಕುತ್ತಿದ್ದರು. ಹೀಗಾಗಿ ಅವರಿಗೆ ಅನೇಕ ಬಿಲ್ಡರ್ಸ್ ಗಳಿಂದ ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿದೆ. ಹತ್ಯೆಯ ಹಿಂದೆ ಬೆದರಿಕೆ ಹಾಕಿದ್ದವರ ಕೈವಾಡ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇನ್ನು ಕೆಲವರ ಪ್ರಕಾರ ನಗರದ ಹೃದಯ ಭಾಗದಲ್ಲಿರುವ ದೇವಾಸ್ಥಾನದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದುದ್ದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಇನ್ನು ಕೊಲೆಯಾದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಅವುಗಳ ವಿಡಿಯೋ ಪರಿಶೀಲನೆ ನಡೆಸುವುದಾಗಿ ಬಾರ್ಕೆ ಪೊಲೀಸರು ತಿಳಿಸಿದ್ದಾರೆ.