ರಾಜ್ಯ

ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: 26 ನವಜಾತ ಶಿಶುಗಳ ರಕ್ಷಣೆ

Manjula VN

ಕಲಬುರ್ಗಿ: ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಘಟನೆ ವೇಳೆ 26 ನವಜಾತ ಶಿಶುಗಳನ್ನು ರಕ್ಷಣೆ ಮಾಡಿರುವ ಘಟನೆ ಗುಲ್ಬರ್ಗಾ ಜಿಲ್ಲೆಯ ಕಲಬುರ್ಗಿಯಲ್ಲಿ ಬುಧವಾರ ನಡೆದಿದೆ.

ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿದ್ದ ಎಸಿಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಗಾಬರಿಗೊಂಡಿರುವ ಆಸ್ಪತ್ರೆ ಸಿಬ್ಬಂದಿಗಳು ಸಮಯಪ್ರಜ್ಞೆಯಿಂದ ನಿಗಾ ಘಟಕದ ಗಾಜುಗಳನ್ನು ಒಡೆದು 26 ನವಜಾತ ಶಿಶುಗಳನ್ನು ಸ್ಥಳಾಂತರ ಮಾಡುವ ಮೂಲಕ ರಕ್ಷಣೆ ಮಾಡಿದ್ದಾರೆ.

ನಿಗಾ ಘಟಕದಲ್ಲಿ 26 ನವಜಾತ ಶಿಶುಗಳಿದ್ದವು. ಇದೀಗ ಎಲ್ಲಾ ಶಿಶುಗಳನ್ನು ರಕ್ಷಣೆ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಯಾವುದೇ ಮಗುವಿಗೂ ಸಮಸ್ಯೆಗಳು ಎದುರಾಗಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಸಿಗಳು ಸ್ಫೋಟಗೊಂಡಿದೆ ಎಂದು ಜಿಲ್ಲಾ ಸರ್ಜನ್ ನಳಿನಿ ನಮೋಶಿ ಹೇಳಿದ್ದಾರೆ.

ಘಟನೆ ಸಂಬಂಧ ಈಗಾಗಲೇ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು ಅಧಿಕಾರಿಗಳ ಬಳಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

SCROLL FOR NEXT