ಸಿದ್ದರಾಮನ ಹುಂಡಿಯಲ್ಲಿ ಏರ್ಪಡಿಸಲಾಗಿದ್ದ ಭೋಜನ ವ್ಯವಸ್ಥೆಯನ್ನು ಪರಿಶೀಲಿಸುತ್ತಿರುವ ಸಿಎಂ
ಮೈಸೂರು: ತಾವು ನಾಸ್ತಿಕರಲ್ಲ, ಆಸ್ತಿಕ ಎಂದು ಶುಕ್ರವಾರ ಪುನರುಚ್ಚರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ದೃಷ್ಟಿಯಲ್ಲಿ ದೇವರು ಎಂದರೇ ಜನರು ಮಾತ್ರ ಎಂದಿದ್ದಾರೆ. ಅಲ್ಲದೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದ್ದಾರೆ.
ಇಂದು ತಮ್ಮ ಸ್ವಗ್ರಾಮ ಮೈಸೂರು ತಾಲ್ಲೂಕಿನ ಸಿದ್ದರಾಮಯ್ಯನಹುಂಡಿಯಲ್ಲಿ ನಡೆದ ಸಿದ್ದರಾಮೇಶ್ವರ ಹಾಗೂ ಚಿಕ್ಕತಾಯಮ್ಮ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈ ಜಾತ್ರೆ 3 ವರ್ಷಕೊಮ್ಮೆ ನಡೆಯುತ್ತದೆ. 2011 ರಲ್ಲಿ ಜಾತ್ರಾ ಮಹೋತ್ಸವ ನಡೆದಿತ್ತು. ಆ ಸಮಯದಲ್ಲಿ ನಾನು ದೇವರ ಕಾರ್ಯದಲ್ಲಿ ಪಾಲ್ಗೊಂಡಿದ್ದೆ. ಈಗ ಜಾತ್ರೆ ನಡೆದು 5 ವರ್ಷ ಆಗಿದೆ. ಕಾರಣ ಸಿದ್ದರಾಮೇಶ್ವರ ದೇವಾಲಯದ ಜೀರ್ಣೋದ್ದಾರದ ಕೆಲಸ ಇದ್ದುದ್ದರಿಂದ ಸ್ವಲ್ಪ ವಿಳಂಬವಾಗಿ ನಡೆಯುತ್ತಿದೆ. ಪ್ರತಿ 3 ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.
ಬಾಯಿ ಬೀಗ ಹಾಕುವ ಪದ್ಧತಿ ಒಂದು ಮೂಢ ನಂಬಿಕೆ. ಆದರೆ ಗ್ರಾಮಸ್ಥರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಈ ಪದ್ಧತಿಗೆ ವಿರೋಧವಿಲ್ಲ ಎಂದ ಸಿಎಂ, ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ಬಂದಾಗ ಈ ಪದ್ಧತಿಗಳು ತಾನಾಗಿಯೇ ನಿಷೇಧಕ್ಕೆ ಒಳಗಾಗುತ್ತವೆ ಎಂದರು.
ನಾನು ಜನರ ಭಾವನೆಗಳಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಆದರೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಡಬೇಕು. ಕಂದಾಚಾರ, ಮೌಢ್ಯಗಳನ್ನು ನಂಬುವುದಿಲ್ಲ ಬಸವಣ್ಣನವರ ತತ್ವ ಆದರ್ಶಗಳನ್ನು ನಂಬುವವನು ನಾನು. ಸಮಾಜಕ್ಕೆ ಎದರಬೇಕೇ ವಿನಃ ಅನಾಧಿಕಾಲದಿಂದಲೂ ಆಚರಿಸಿಕೊಂಡು ಬರುವ ಈ ಮೌಢ್ಯಗಳಿಗೆ ಹೆದರಬಾರದು ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos