ರಾಜ್ಯ

ಮಹಾರಾಣಿ ಕಾಲೇಜು ಪ್ರಾಂಶುಪಾಲರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ, ವಿದ್ಯಾರ್ಥಿನಿಯರ ಮಾರಾಮಾರಿ

Sumana Upadhyaya

ಬೆಂಗಳೂರು: ಪ್ರಾಂಶುಪಾಲರ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣೆ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರ ಜಗಳ ಬೀದಿಗೆ ಬಂದಿದೆ. ಪ್ರಾಂಶುಪಾಲರ ಬದಲಾವಣೆ ವಿಚಾರ ಕುರಿತು ವಿದ್ಯಾರ್ಥಿನಿಯರ ಪರ-ವಿರೋಧ ಪ್ರತಿಭಟನೆ ಶನಿವಾರ ತಾರಕಕ್ಕೇರಿ ವಿದ್ಯಾರ್ಥಿನಿಯರ ಗುಂಪುಗಳ ನಡುವೆ ಕಾಲೇಜು ಆವರಣದಲ್ಲೇ ಭಾರೀ ಹೊಡೆದಾಟ ನಡೆದಿದೆ.

ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯವಾಗದೆ ಪೊಲೀಸರು ಹತಾಶರಾಗಿದ್ದು ಕಂಡುಬಂತು. ಪರೀಕ್ಷೆ ದಿನಾಂಕ ಹತ್ತಿರ ಬರುತ್ತಿರುವುದರಿಂದ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಇದೇ ವೇಳೆ ಪ್ರಾಂಶುಪಾಲೆ ಪ್ರೊ.ಕೋಮಲಾ ಅವರ ಪ್ರತಿಕ್ರತಿಯನ್ನು ದಹಿಸಲು ಯತ್ನಿಸಿದಾಗ ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿ ನಡೆದಿದೆ. ವಿದ್ಯಾರ್ಥಿನಿಯರು ಪರಸ್ಪರ ಜಡೆ ಎಳೆದುಕೊಂಡು ಬಡಿದಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರನ್ನು ಲೆಕ್ಕಿಸದೆ ವಿದ್ಯಾರ್ಥಿನಿಯರು ಹೊಡೆದಾಡಲು ಮುಂದಾಗಿದ್ದಾರೆ.

ಪ್ರಾಂಶುಪಾಲರು ಬೇಕೆಂದು ಕಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಪ್ರಿನ್ಸಿಪಾಲ್ ಬೇಡವೆಂದು ಕಾಮರ್ಸ್ ವಿದ್ಯಾರ್ಥಿನಿಯರು ಧರಣಿ ನಡೆಸುತ್ತಿದ್ದಾರೆ.

ಈ ಮಧ್ಯೆ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಕಾಲೇಜು ಪ್ರಾಂಶುಪಾಲೆ ಕೋಮಲಾ, ನಾನು ಯುಜಿಸಿಯ ಹಣ ನುಂಗಿದ್ದೇನೆ ಎಂದು ಒಂದು ಬಣದ ವಿದ್ಯಾರ್ಥಿನಿಯರು ಮಾಡುತ್ತಿರುವ ಆರೋಪ ಸುಳ್ಳು. ಕಾಲೇಜು ಆಡಳಿತ ವಿಷಯದಲ್ಲಿ ನಾನು ಪಾರದರ್ಶಕಳಾಗಿದ್ದೇನೆ. ಕಾಲೇಜಿನ ಬಹುತೇಕ ವಿದ್ಯಾರ್ಥಿನಿಯರು ನನ್ನ ಪರವಾಗಿದ್ದಾರೆ. ಅದಕ್ಕೆ ನನ್ನ ನಡವಳಿಕೆ, ಕೆಲಸದ ಶೈಲಿಯೇ ಕಾರಣ. ನನ್ನ ವರ್ಗಾವಣೆ ವಿಚಾರ ಕುರಿತಂತೆ ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಡುತ್ತಿರುವ ವಿಷಯ ಮಾಧ್ಯಮಗಳಿಂದ ತಿಳಿದು ನಿಜಕ್ಕೂ ಬೇಸರವಾಗುತ್ತಿದೆ. ಪ್ರೊ.ನಾರಾಯಣ ಸ್ವಾಮಿಯವರು ನಿಜಕ್ಕೂ ಸರಿಯಾಗಿ ಪಾಠ ಮಾಡುತ್ತಿಲ್ಲ. ಸರಿಯಾಗಿ ತರಗತಿಗೆ ಹೋಗುವುದಿಲ್ಲ. ಪಠ್ಯವನ್ನು ಮುಗಿಸಿಲ್ಲ ಎಂದು ಆರೋಪಿಸಿದ್ದಾರೆ.

SCROLL FOR NEXT